ಕಳ್ಳತನವಾಗಿದ್ದ 3.55 ಕೋಟಿ ಮೌಲ್ಯದ ಚಿನ್ನಾಭರಣವನ್ನು ವಾಪಸ್ ಮಾಲೀಕರಿಗೆ ಒಪ್ಪಿಸಿದ ಮೈಸೂರು ಪೊಲೀಸರು

ಕಳೆದುಕೊಂಡಿದ್ದ ಚಿನ್ನವನ್ನು ವಾಪಸ್ ಪಡೆದವರಲ್ಲಿ ಸಂತಸ, ಕರ್ತವ್ಯದಲ್ಲಿ ಸಾರ್ಥಕತೆ ಕಂಡ ಪೊಲೀಸರು.

ಮೈಸೂರು : ನಗರದ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕಳುವಾಗಿದ್ದ ಸುಮಾರು 3.55 ಕೋಟಿ ಮೌಲ್ಯದ ಚಿನ್ನಾಭರಣಗಳನ್ನು ಕಳ್ಳರಿಂದ ವಶಪಡಿಸಿಕೊಂಡ ಪೊಲೀಸರು ಮಾಲೀಕರಿಗೆ ವಾಪಸ್ ಒಪ್ಪಿಸಿದ ಘಟನೆಗೆ ಮೈಸೂರು ಪೊಲೀಸ್ ಆಯುಕ್ತರ ಕಚೇರಿ ಸಾಕ್ಷಿಯಾಯಿತು.
ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಶನಿವಾರ ಮಧ್ಯಾಹ್ನ ಸಂಭ್ರಮ ಮನೆಮಾಡಿತ್ತು. ಪ್ರಾಪರ್ಟಿ ರಿಟರ್ನ್ ಪರೇಡ್‍ನಲ್ಲಿ ಕಳುವಾಗಿದ್ದ ಮಾಲುಗಳನ್ನು ಮಾಲೀಕರಿಗೆ ಹಿಂತಿರುಗಿಸುವಾಗ ಕಳೆದು ಹೋದದ್ದು ಸಿಗಲ್ಲ ಎಂಬ ಭಾವನೆಯಲ್ಲಿದ್ದ ಜನರ ಮೊಗದಲ್ಲಿ ಸಂತಸ ಮೂಡಿದರೆ, ತಮ್ಮ ಕರ್ತವ್ಯವನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಪೊಲೀಸರ ಮುಖದಲ್ಲಿತ್ತು. 
ನಗರ ವ್ಯಾಪ್ತಿಯ ವಿವಿಧ ಪೊಲೀಸ್ ಠಾಣೆಗಳಲ್ಲಿ 2022ನೇ ಸಾಲಿನಲ್ಲಿ 320 ಕಳವು ಪ್ರಕರಣ ಪತ್ತೆಯಾಗಿದ್ದವು. ಈ ಪ್ರಕರಣ ಬೇಧಿಸಿದ ಪೊಲೀಸರು 346 ಆರೋಪಿಗಳನ್ನು ಬಂಧಿಸಿ 3.55 ಕೋಟಿ ರೂ. ಮೌಲ್ಯದ ಕಳುವಾದ ಚಿನ್ನಾಭರಣ, ವಾಹನಗಳನ್ನು ವಶಕ್ಕೆ ಪಡೆದಿದ್ದರು.
ಒಟ್ಟು 753 ಪ್ರಕರಣಗಳು ದಾಖಲಾಗಿದ್ದು, ಇವುಗಳಲ್ಲಿ 320 ಪ್ರಕರಣ ಬೇಧಿಸಿರುವ ಪೊಲೀಸರು. ಒಟ್ಟು ಕಳುವಾಗಿರುವ 6.34 ಕೋಟಿ ಮೌಲ್ಯದ ವಸ್ತುಗಳ ಪೈಕಿ 3.55 ಕೋಟಿ ರೂ. ಮೌಲ್ಯದ ಮಾಲನ್ನು ವಶಕ್ಕೆ ಪಡೆದಿದ್ದರು. ಇವುಗಳಲ್ಲಿ ಪ್ರಮುಖವಾಗಿ 4.600 ಕೆ.ಜಿ. ಚಿನ್ನ, 16.900 ಕೆ.ಜಿ. ಬೆಳ್ಳಿ, 106 ಮೊಬೈಲ್ ಫೋನ್‍ಗಳು ಮತ್ತು 184 ದ್ವಿ ಚಕ್ರ ವಾಹನಗಳನ್ನು ವಶಪಡಿಕೊಳ್ಳಲಾಗಿತ್ತು. ಅಲ್ಲದೇ ಕಾರು, ಲ್ಯಾಪ್ ಟಾಪ್ ಗಳೂ ಸಹ ಪತ್ತೆಯಾಗಿದ್ದವು.
ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿಗಳಾದ ಮುತ್ತುರಾಜ್, ಗೀತಾ ಪ್ರಸನ್ನ, ಶಿವರಾಜ್ ಮುಂತಾದವರು ಇದ್ದರು.

ಅಪರಾಧ ಮತ್ತು ಕಳವು ಪ್ರಕರಣಗಳು ಸಂಭವಿಸಿದ ಕೂಡಲೇ 112 ಮತ್ತು 1930 ಸಹಾಯವಾಣಿ ಸಂಖ್ಯೆಗಳಿಗೆ ಸಾರ್ವಜನಿಕರು ತಡಮಾಡದೇ ಕರೆ ಮಾಡಿದಲ್ಲಿ ಪೊಲೀಸ್ ಇಲಾಖೆ ತುರ್ತು ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ. ಸೈಬರ್ ಅಪರಾಧ ಪ್ರಕರಣಗಳ ಪೈಕಿ ಹಣ ಕಳೆದುಕೊಂಡವರು ದೂರು ನೀಡಿದ ಒಂದೇ ದಿನದಲ್ಲಿ 1 ಕೋಟಿ ರೂ.ಗಳನ್ನು ಅವರಿಗೆ ಹಿಂದಿರುಗಿಸಿದ ಸಾಧನೆ ಇಡೀ ರಾಜ್ಯದಲ್ಲಿ ಮೊದಲ ಬಾರಿಗೆ ಮೈಸೂರು ಪೊಲೀಸರಿಂದ ಮಾಡಲ್ಪಟ್ಟಿದೆ. ಎಸಿಪಿ ಶಿವಕುಮಾರ್ ಅವರ ನೇತೃತ್ವದ ತಂಡ ಈ ಅಪರಾಧ ಪ್ರಕರಣದಲ್ಲಿ ವಿಶೇಷ ಶ್ರಮ ವಹಿಸಿ ಯಶಸ್ಸು ಸಾಧಿಸಿದೆ. 
ರಮೇಶ್ ಬಾನೋತ್, ಮೈಸೂರು ನಗರ ಪೊಲೀಸ್ ಆಯುಕ್ತರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು