ಸ್ಕ್ಯಾನಿಂಗ್ ವರದಿ ನೀಡುವಲ್ಲಿ ಲೋಪ : ಮದ್ದೂರಿನ ಡಿ2 ಡಯಗ್ನೋಸ್ಟಿಕ್ ಸೆಂಟರ್ ಗೆ 15 ಲಕ್ಷ ರೂ. ದಂಡ

ಮಂಡ್ಯ : ಗರ್ಭಿಣಿ ಮಹಿಳೆಯೊಬ್ಬರ ಸ್ಕ್ಯಾನಿಂಗ್‍ನಲ್ಲಿ ಭ್ರೂಣದ ಅಸಹಜ ಬೆಳವಣಿಗೆಯನ್ನು ಪತ್ತೆ ಹಚ್ಚದೇ ನಿರ್ಲಕ್ಷ್ಯ ತೋರಿದ ಹಿನ್ನೆಲೆಯಲ್ಲಿ ಜಿಲ್ಲೆಯ ಮದ್ದೂರು ಪಟ್ಟಣದಲ್ಲಿರುವ ಡಿ2 ಡಯಗ್ನೋಸ್ಟಿಕ್ ಸೆಂಟರ್‍ಗೆ ಮಂಡ್ಯ ಜಿಲ್ಲಾ ಗ್ರಾಹಕರ ವೇದಿಕೆ 15 ಲಕ್ಷ ರೂ. ದಂಡ ವಿಧಿಸಿ ಆದೇಶ. ನೀಡಿದೆ.
3 ವರ್ಷಗಳ ಹಿಂದೆ ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಮಹೇಶ್ ಎಂಬವರ ಪತ್ನಿ 25 ವರ್ಷದ ಸಿಂಧೂಶ್ರೀ ಅವರು ಮದ್ದೂರು ಕೆಎಸ್‍ಅರ್‍ಟಿಸಿ ಬಸ್ ನಿಲ್ದಾಣದ ಬಳಿಯ ಡಿ2 ಡಯಾಗ್ನೋಸ್ಟಿಕ್ ಸೆಂಟರ್‍ಗೆ ಭೇಟಿ ನೀಡಿ ತನ್ನ 5ನೇ ತಿಂಗಳ ಗರ್ಭದ ಭ್ರೂಣದ ಬೆಳವಣೆಗೆಯನ್ನು ತಿಳಿದು ಕೊಳ್ಳಲು ಸ್ಕ್ಯಾನಿಂಗ್ ಮಾಡಿಸಿದ್ದರು. ಸ್ಕ್ಯಾನಿಂಗ್ ಮಾಡಿದ ಡಾ.ದೀಪಕ್ ಗೌತಮ್ ಎಂಬ ವೈದ್ಯರು ಭ್ರೂಣವು ಸಹಜವಾಗಿಯೇ ಇದೆ ಎಂದು ವರದಿ ನೀಡಿದ್ದರು.
ಆದರೆ ಸಿಂಧೂಶ್ರೀ ಅವರಿಗೆ ಜನಿಸಿದ ಹೆಣ್ಣು ಮಗು ಅಸಹಜತೆಯಿಂದ ಕೂಡಿತ್ತು. ಇದರಿಂದಾಗಿ ಮನನೊಂದ ಸಿಂಧೂಶ್ರೀ ಕುಟುಂಬದವರು ಸ್ಕ್ಯಾನಿಂಗ್ ಸೆಂಟರ್ ಹಾಗೂ ವೈದ್ಯರ ವಿರುದ್ದ ಜಿಲ್ಲಾ ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು.
ಪ್ರಕರಣ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವೇದಿಕೆ ಅಧ್ಯಕ್ಷರಾದ ಸಿ.ಎಂ. ಚಂಚಲ ಅವರು, ಸ್ಕ್ಯಾನಿಂಗ್ ಸೆಂಟರ್‍ರ  ವೈದ್ಯರ ನಿರ್ಲಕ್ಷ್ಯ ಸಾಬೀತಾದ ಹಿನ್ನೆಲೆಯಲ್ಲಿ ನೊಂದ ಗರ್ಭಿಣಿ ಮಹಿಳೆಗೆ 15 ಲಕ್ಷ ರೂ ದಂಡ ಪಾವತಿಸುವಂತೆ ಆದೇಶಿಸಿದ್ದಾರೆ.
ನೊಂದ ಗರ್ಭಿಣಿ ಮಹಿಳೆ ಪರವಾಗಿ ನ್ಯಾಯವಾದಿ ಮಂಡ್ಯದ ಆರ್.ಜಗನ್ನಾಥ್ ವಾದ ಮಂಡಿಸಿದ್ದರು.