ನಂಜನಗೂಡಿನಿಂದ ಮೇಲುಕೋಟೆ ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳ ಮೇಲೆ ಮರದ ಕೊಂಬೆ ಮುರಿದು ಬಿದ್ದು ನಾಲ್ವರಿಗೆ ಗಾಯ

ಆಂಬುಲೆನ್ಸ್ ಲಭ್ಯವಿಲ್ಲದೇ ಪರದಾಡಿದ ಗಾಯಾಳುಗಳು

ಮೇಲುಕೋಟೆ : ಶಾಲೆಯಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳ ಮೇಲೆ ಅಚಾನಕ್ಕಾಗಿ ಮರದ ಕೊಂಬೆ ಮುರಿದು ಬಿದ್ದು ಮೂವರು ಮಕ್ಕಳು ಮತ್ತು ಒಬ್ಬ ಶಿಕ್ಷಕ ಗಾಯಗೊಂಡಿರುವ ಘಟನೆ ಮೇಲುಕೋಟೆಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ. 
ಯೋಗಾನರಸಿಂಹಸ್ವಾಮಿ ದೇವಾಲಯದ ಬೆಟ್ಟ ಹತ್ತುವ ವೇಳೆ ಮೆಟ್ಟಿಲ ಪಕ್ಕದಲ್ಲಿದ್ದ ಒಣಗಿದ ಮರರ ದೊಡ್ಡ ಗಾತ್ರದ ಕೊಂಬೆ ಮುರಿದು ಬಿದ್ದು ನಂಜನಗೂಡಿನ ಲಯನ್ಸ್ ಶಾಲೆಯಿಂದ ಪ್ರವಾಸಕ್ಕೆ ಬಂದಿದ್ದ ವಿದ್ಯಾರ್ಥಿಗಳಾದ ನಿಶಾಂತ್, ವರುಣ್, ಯೋಗೇಶ್ ಹಾಗೂ ಶಿಕ್ಷಕ ಕೇಶವರಾವ್ ಗಾಯಗೊಂಡಿದ್ದಾರೆ. 
ಗಾಯಗೊಂಡ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಮೇಲುಕೋಟೆ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಿ, ಒಬ್ಬ ವಿದ್ಯಾರ್ಥಿಯ ಕಾಲಿಗೆ ತೀವ್ರವಾದ ಪೆಟ್ಟು ಬಿದ್ದಿದ್ದು, ಮತ್ತಿಬ್ಬರಿಗೆ ತಲೆ ಹಾಗೂ ಕಣ್ಣಿನ ಭಾಗಕ್ಕೆ ಗಾಯವಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರು ಕೆ.ಆರ್.ಎಸ್ ಆಸ್ವತ್ರೆಗೆ ರವಾನಿಸಲಾಗಿದೆ.

ವಿಶ್ವವಿಖ್ಯಾತ ಪ್ರವಾಸಿತಾಣ ಮೇಲುಕೋಟೆಯ ಸರ್ಕಾರಿ ಆಸ್ವತ್ರೆಯಲ್ಲಿ ಆಂಬುಲೆನ್ಸ್ ಇದ್ದರೂ, ಚಾಲಕನಿಲ್ಲದೇ ಗಾಯಾಳುಗಳನ್ನು ಸಾಗಿಸಲು ಪರದಾಡಬೇಕಾಯಿತು. ಒಂದು ಗಂಟೆ ಬಳಿಕ ಪಾಂಡವಪುರದಿಂದ ಬಂದ ಆಂಬುಲೆನ್ಸ್‍ನಲ್ಲಿ ಗಾಯಾಳುಗಳನ್ನು ಮೈಸೂರಿಗೆ ರವಾನಿಸಲಾಯಿತು.
ಈ ಹಿಂದೆಯೂ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಲಭ್ಯವಾಗದೆ ಒಬ್ಬರು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು. ಆಂಬುಲೆನ್ಸ್ ಹಾಗೂ ಸಮರ್ಪಕ ಚಿಕಿತ್ಸೆ ನೀಡಲು ಇಲ್ಲಿನ ಆಸ್ಪತ್ರೆಯ ಆಡಳಿತ ವಿಫಲವಾಗಿದೆ ಎಂದು ಸ್ಥಳೀಯರಾದ ದಿಲೀಪ್, ಶಿವಕುಮಾರ್, ಶಶಿ, ನರಸಿಂಹ್ಮೇಗೌಡ, ಪ್ರದೀಪ್, ಸತ್ಯ, ಸೇರಿದಂತೆ ಅನೇಕರು ಆರೋಪಿಸಿದರು. 




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು