ಮತದಾರರ ಪಟ್ಟಿ ಪರಿಷ್ಕರಣೆ : ಬಿಜೆಪಿಯ 40 ಪರ್ಸೆಂಟ್ ಭ್ರಷ್ಟಾಚಾರದ ಮುಂದುವರಿದ ಭಾಗ ಎಂಧು ಛೇಡಿಸಿದ ಸಿದ್ದರಾಮಯ್ಯ

ಮೈಸೂರು : ಮತದಾರ ಪಟ್ಟಿ ಪರಿಷ್ಕರಣೆ ಬಿಜೆಪಿಯ 40 ಪರ್ಸೆಂಟ್ ಭ್ರಷ್ಟಾಚಾರದ ಮುಂದುವರಿದ ಭಾಗ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ಮೈಸೂರಿನಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಅವರು ಮಾ ತನಾಡಿ, ಬಿಜೆಪಿಯವರು ಏನು ಬೇಕಾದರೂ ಮಾಡುತ್ತಾರೆ. ಚುನಾವಣೆಯಲ್ಲಿ ಗೆಲ್ಲೋಕೆ ಏನೆಲ್ಲ ಆಟ ಆಡ್ತಾರೆ ಅನ್ನೋದಕ್ಕೆ ಇದೂ ಒಂದು ಉದಾಹರಣೆ. ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಮಾಹಿತಿ ಕಳ್ಳತನ ಆಗಿದೆ. ಈ ಬಗ್ಗೆ ದೂರು ನೀಡಲಾಗಿದೆ. ನಾಳೆ ಚುನಾವಣಾ ಆಯೋಗದ ಮುಂದೆ ಧರಣಿ ಮಾಡುತ್ತೇವೆ. ಬಿಬಿಎಂಪಿ ಆಯುಕ್ತರು ಖಾಸಗಿ ಕಂಪನಿಗೆ ಇದನ್ನು ವಹಿಸಿದ್ದಾರೆ. ಬೆಂಗಳೂರು ಅಭಿವೃದ್ಧಿ ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯವರಿಗೆ ಈ ವಿಷಯ ಗೊತ್ತಿದ್ದೇ ಆಗಿದೆ ಎಂದರು.
ಚುನಾವಣಾ ಆಯೋಗ ಸ್ವೀಪ್ ಹೆಸರಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಕಾಂಪಿಟೇಟಿವ್ ಬಿಡ್ ಕರೆಯಬೇಕಿತ್ತು. ಉಚಿತವಾಗಿ ಪರಿಷ್ಕರಣೆ ಮಾಡುತ್ತೇವೆ ಎಂದಿದ್ದಕ್ಕೆ ಚಿಲುಮೆ ಮತ್ತು ಹೊಂಬಾಳೆ ಕಂಪನಿಗೆ ಕೊಟ್ಟಿದ್ದಾರೆ. ಇದಕ್ಕೆ ಕೋಟ್ಯಂತರ ರೂಪಾಯಿ ಖರ್ಚಾಗುತ್ತದೆ. ಆ ಕಂಪನಿ ಲಾಭ ಇಲ್ಲದೆ ಇದನ್ನು ಮಾಡುತ್ತದೆಯೇ ಎಂದು ಪ್ರಶ್ನಿಸಿದರು.

ಅಲ್ಪಸಂಖ್ಯಾತ, ದಲಿತರು, ಹಿಂದುಳಿದವರು ಕಾಂಗ್ರೆಸ್ ಪರ ಇರುತ್ತಾರೆ. ಅಂತಹ ಮತದಾರರ ಮಾಹಿತಿ ಡಿಲೀಟ್ ಮಾಡಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ನಾವು ಆರೋಪ ಮಾಡಿದ ಮೇಲೆ ಬಿಬಿಎಂಪಿ ಆಯುಕ್ತರು ರಕ್ಷಣಾತ್ಮಕವಾಗಿ ಹೇಳಿಕೆ ನೀಡುತ್ತಿದ್ದಾರೆ. ಇಲ್ಲಿ ಮಾಹಿತಿ ಕಳ್ಳತನ ಆಗಿದೆ. ಬಿಎಲ್‍ಓಗಳು ಯಾವಾಗಲೂ ಸರ್ಕಾರಿ ಅರೆ ಸರ್ಕಾರಿ ನೌಕರರಾಗಬೇಕು. ಇವರು ತಮಗೆ ಬೇಕಾದವರನ್ನು ಬಿಎಲ್‍ಓ ಮಾಡಿಕೊಂಡಿದ್ದಾರೆ. ಇದು ಕಾನೂನು ಬಾಹಿರ. ಖಾಸಗಿಯವರನ್ನು ಬಿಎಲ್‍ಒಗಳ ನೇಮಕಕ್ಕೆ ನಿಮಗೆ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದ ಹಲವು ಕ್ಷೇತ್ರಗಳಿಂದ ಸ್ಪರ್ಧಿಸುವಂತೆ ಒತ್ತಾಯ ಮಾಡಲಾಗುತ್ತಿದೆ. ಮೂರು ಕ್ಷೇತ್ರಗಳನ್ನು ಅಂತಿಮಗೊಳಿಸಿದ್ದು, ಯಾವುದಾದರು ಒಂದು ಕ್ಷೇತ್ರದಲ್ಲಿ ಮಾತ್ರ ಸ್ಪರ್ಧಿಸುತ್ತೇನೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕೋಲಾರ, ಬಾದಾಮಿ ಹಾಗೂ ವರುಣಾ ಕ್ಷೇತ್ರ ಶಾರ್ಟ್ ಲೀಸ್ಟ್‍ನಲ್ಲಿದೆ. ಚುನಾವಣೆ ಘೋಷಣೆ ನಂತರ ಸ್ಪರ್ಧೆ ಮಾಡುವ ಕ್ಷೇತ್ರದ ಬಗ್ಗೆ ಹೇಳುತ್ತೇನೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ಸೋಲಿನ ಭಯದಲ್ಲಿ ಸಿದ್ದರಾಮಯ್ಯ ಸರ್ವೆ ಮೊರೆ ಹೋಗಿದ್ದಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ವೆ ಮಾಡಿಸಿದರೆ ತಪ್ಪೇನು? ನರೇಂದ್ರ ಮೋದಿ ಅವರು ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿರಲಿಲ್ಲವೇ? ಹಾಗಾದರೆ ಅವರು ಸರ್ವೆ ಮಾಡಿಸಿರಲಿಲ್ಲವೇ? ನಾವು ರಾಜ್ಯವ್ಯಾಪಿ ಪ್ರವಾಸ ಮಾಡುತ್ತೇವೆ. ಸುರಕ್ಷಿತ ಕ್ಷೇತ್ರಕ್ಕಾಗಿ ಸರ್ವೆ ಮಾಡಿಸಿರುತ್ತಾರೆ. ನಾನು ಸರ್ವೆ ಮಾಡಿಸಿಲ್ಲ, ಪಕ್ಷ ಸರ್ವೆ ಮಾಡಿಸುತ್ತಿದೆ ಎಂದರು.
ಪಂಚರತ್ನ ಯಾತ್ರೆ ಕುರಿತು ಪ್ರತಿಕ್ರಿಯಿಸಿ, ಜೆಡಿಎಸ್ ಯಾವ ಯಾತ್ರೆ ಮಾಡಿದರೂ ಪರವಾಗಿಲ್ಲ. ಜೆಡಿಎಸ್‍ನವರು ಅಷ್ಟ ರತ್ನ, ದಶರತ್ನ ಮಾಡಲಿ. ಅವರ ಸಂಘಟನೆ ಅವರಿಗೆ. ನಾನು ಯಾವುದಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು