ಮೈಸೂರು-ಬೆಂಗಳೂರು ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆ ಮತ್ತು ಅವೈಜ್ಞಾನಿಕ : ಶಾಸಕ ಸಿ.ಎಸ್.ಪುಟ್ಟರಾಜು

ವಾರದೊಳಗೆ ದುದ್ದ ಹೋಬಳಿಯ ರಸ್ತೆ ರಿಪೇರಿ ಮಾಡಿಸದಿದ್ದರೆ ಸಂಸದ ಪ್ರತಾಪ್ ಸಿಂಹ ಮನೆ ಮುಂದೆ ಧರಣಿ 

ಪಾಂಡವಪುರ : ಮೈಸೂರು-ಬೆಂಗಳೂರು ಹೆದ್ದಾಗಿ ಕಾಮಗಾರಿಯು ಸಂಪೂರ್ಣ ಕಳಪೆ ಗುಣಮಟ್ಟದಲ್ಲಿ ನಡೆದಿದ್ದು, ಇದೊಂದು ಅವೈಜ್ಞಾನಿಕ ಕಾಮಗಾರಿಯಾಗಿದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಆರೋಪಿಸಿದರು.
ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಹೆದ್ದಾರಿ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಯಾರೂ ಗುಣಮಟ್ಟವನ್ನು ಪರಿಶೀಲಿಸುತ್ತಿಲ್ಲ. ಜತೆಗೆ ಅವೈಜ್ಞಾನಿಕತೆಯಿಂದ ಕೂಡಿದೆ. ಕಾಮಗಾರಿಗೆ ಬಳಸಿರುವ ಕಚ್ಛಾವಸ್ತುಗಳು ಕಳಪೆಯಾಗಿವೆ. ರಸ್ತೆಯಲ್ಲಿ ಬಿದ್ದ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಒಂದು ಸಣ್ಣ ಮಳೆ ಬಂದರೂ ಬಸ್ಸುಗಳನ್ನು ಮುಳುಗಿಸುವಷ್ಟು ನೀರು ರಸ್ತೆಯಲ್ಲಿ ನಿಲ್ಲುತ್ತದೆ ಇದ್ಯಾವ ಸೀಮೆ ಹೈವೆ ಎಂದು ಟೀಕಿಸಿದರು.
ಅಲ್ಲದೇ ದುದ್ದ ಹೋಬಳಿ, ದೊಡ್ಡ ಬ್ಯಾಡರಹಳ್ಳಿ ರಸ್ತೆಗಳಲ್ಲಿ ಹೈವೆ ಕಾಮಗಾರಿಗೆ ಮೆಟಿರೀಯಲ್ ಸಾಗಿಸಲು ಬೃಹತ್ ಟಿಪ್ಪರ್‍ಗಳನ್ನು ಬಳಸಿ ನಮ್ಮ ವ್ಯಾಪ್ತಿಯ ರಸ್ತೆಗಳನ್ನು ಸಂಪೂರ್ಣವಾಗಿ ಹಾಳು ಮಾಡಿದ್ದಾರೆ. ಈ ಬಗ್ಗೆ ನಾನು ಡಿಬಿಎಲ್ ಕಂಪನಿಗೆ ಎಚ್ಚರಿಕೆ ನೀಡಿ ರಸ್ತೆಯಲ್ಲಿ ಬೃಹತ್ ಟಿಪ್ಪರ್ ತರಬೇಡಿ ಎಂದು ಹೇಳಿದ್ದೆ. ಆದರೆ, ಸಂಸದ ಪ್ರತಾಪ್ ಸಿಂಹ ಮಧ್ಯ ಪ್ರವೇಶಿಸಿ ಕಾಮಗಾರಿಗೆ ತಡೆ ಒಡ್ಡಬೇಡಿ ಯಾವುದೇ ರಸ್ತೆಗಳು ಹಾಳಾಗಿದ್ದರೆ ನಾನು ರಿಪೇರಿ ಮಾಡಿಸಿಕೊಡುತ್ತೇನೆ ಎಂದು ಭರವಸೆ ನೀಡಿ ಆರು ತಿಂಗಳಾದರೂ ಇನ್ನೂ ರಸ್ತೆ ರಿಪೇರಿ ಮಾಡಿಸಿಲ್ಲ. ಒಂದು ವಾರದೊಳಗೆ ದುದ್ದ ಹೋಬಳಿ ಮತ್ತು ದೊಡ್ಡ ಬ್ಯಾಡರಹಳ್ಳಿ ರಸ್ತೆಗಳನ್ನು ರಿಪೇರಿ ಮಾಡಿಸದಿದ್ದರೇ ಪ್ರತಾಪ್ ಸಿಂಹ ಮನೆ ಮುಂದೆ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.
ಪ್ರತಾಪ್ ಸಿಂಹ ಮೈಸೂರು ಸಂಸದರು, ರಸ್ತೆ ಹಾಳಾಗಿರುವುದು ಮಂಡ್ಯ ಜಿಲ್ಲೆಯಲ್ಲಿ ಅವರನ್ನು ಯಾಕೆ ಕೇಳ್ತೀರಿ ಅವರೇನು ಕಂಟ್ರಾಕ್ಟ್ ಕೆಲಸ ಮಾಡುತ್ತಿದ್ದಾರಾ ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಪುಟ್ಟರಾಜು ಪ್ರತಾಪ್ ಸಿಂಹ ಕಂಟ್ರಾಕ್ಟರ್ ಮೇಲಿನ ಕಂಟ್ರಾಕ್ಟರ್ ಎಂದು ಮಾರ್ಮಿಕವಾಗಿ ಉತ್ತರಿಸಿದರು. 
ಪುರಸಭಾ ಅಧ್ಯಕ್ಷೆ ಅರ್ಚನಾಚಂದ್ರು, ಸದಸ್ಯರಾದ ಶಿವಣ್ಣ, ಬಿ.ವೈ.ಬಾಬು, ಇಮ್ರಾನ್ ಷರೀಫ್, ಶಿವಕುಮಾರ್, ಚಂದ್ರು, ಕಸಾಪ ಅಧ್ಯಕ್ಷ ಮೇನಾಗರ ಪ್ರಕಾಶ್, ನಿವೃತ್ತ ಉಪ ಪ್ರಾಂಶುಪಾಲ ಶಂಭುನಹಳ್ಳಿ ನಾರಾಯಣಗೌಡ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು