`ಪುನೀತೋತ್ಸವ’ದಲ್ಲಿ ಅರ್ಜನ್ ಜನ್ಯ ಸಂಗೀತಕ್ಕೆ ಪ್ರೇಕ್ಷಕರು ಫಿದಾ, ಗಮನ ಸೆಳೆದ ಐಶ್ವರ್ಯ ಅನಂತ ಕಾರ್ತಿಕ್ ಕಥಕ್ ನೃತ್ಯ, ಸಿದ್ದರಾಜು ಹೂಗಾರ ತಂಡದಿಂದ ಮಲ್ಲಕಂಭ ಪ್ರದರ್ಶನ

ಪ್ರೇರಣಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ದೀಪಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ

ಪಾಂಡವಪುರ : ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಶಾಸಕ ಸಿ.ಎಸ್.ಪುಟ್ಟರಾಜು ನೇತೃತ್ವದಲ್ಲಿ ನಡೆಯುತ್ತಿರುವ `ಪುನೀತೋತ್ಸವ’ ಕಾರ್ಯಕ್ರಮದ ಎರಡನೇ ದಿನ ನಡೆದ ಕಾರ್ಯಕ್ರಮದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜನ್ ಜನ್ಯ ಸಂಗೀತಕ್ಕೆ ಪ್ರೇಕ್ಷಕರು ತಲೆದೂಗಿದರು.

ಅರ್ಜುನ್ ಜನ್ಯ ಮತ್ತು ಸಂಗಡಿಗರು ಹಲವಾರು ಕನ್ನಡ ಚಿತ್ರ ಗೀತೆಗಳನ್ನು ಮನೋಜ್ಞವಾಗಿ ಹಾಡುವ ಮೂಲಕ ನೆರೆದಿದ್ದ ಪ್ರೇಕ್ಷಕರನ್ನು ಮೋಡಿ ಮಾಡಿದರು. ಭಜರಂಗಿ ಚಿತ್ರದ ಜೈ ಜೈ ಭಜರಂಗಿ ಹಾಡುವ ಮೂಲಕ ವೇದಿಕೆಗೆ ಎಂಟ್ರಿಕೊಟ್ಟ ಅರ್ಜನ್‍ಜನ್ಯ ಹಾಡುತ್ತಲೇ ವೇದಿಕೆಯಿಂದ ಕೆಳಗಿಳಿದು ಪ್ರೇಕ್ಷಕರ ಬಳಿ ಧಾವಿಸಿ ಯುವಕರೊಂದಿಗೆ ನರ್ತಿಸಿದರು.
ಈ ವೇಲೆ ಯುವಕರು ಅರ್ಜುನ್ ಜನ್ಯ ಜತೆ ಸೆಲ್ಪಿಗೆ ಮುಗಿಬಿದ್ದಿದು ಕಂಡು ಬಂತು.
ಈ ವೇಳೆ ನೂರಾರು ಪ್ರೇಕ್ಷಕರು ಪುನೀತ್ ಭಾವಚಿತ್ರ ಹಿಡಿದು ಹುಚ್ಚೆದ್ದು ಕುಣಿದು ಕುಪ್ಪಿಳಿಸಿದರು. 
ಅರ್ಜುನ್‍ಜನ್ಯ ಜತೆ ಅನುರಾಧ ಭಟ್, ಚನ್ನಪ್ಪ, ಇಂದೂ ನಾಗರಾಜು ಸೇರಿದಂತೆ ಹಲವು ಕಲಾವಿದರು ತಮ್ಮ ಗಾಯನದ ಮೂಲಕ ಜನರನ್ನು ಮೋಡಿ ಮಾಡಿದರು. 

ಈ ವೇಳೆ ಡಿವೈಎಸ್‍ಪಿ ಸಂದೇಶ್ ಕೂಡ ಜನರ ಒತ್ತಾಯದ ಮೇರೆಗೆ `ಜಯತು ಜಯ ವಿಠಲಾ’ ಸೇರಿದಂತೆ ಒಂದೆರಡು ಹಾಡನ್ನು ಹಾಡಿ ಸಾರ್ವಜನಿರನ್ನು ರಂಜಿಸಿದರು. ಇದಕ್ಕೂ ಮುನ್ನ ನಡೆದ ಐಶ್ವರ್ಯ ಅನಂತ ಕಾರ್ತಿಕ್ ಅವರ  ಕಥಕ್ ನೃತ್ಯ ಪ್ರದರ್ಶನ ಗಮನಸೆಳೆಯಿತು. ಜತೆಗೆ ಸಿದ್ದರಾಜು ಹೂಗಾರ ತಂಡದಿಂದ ನಡೆದ ಮಲ್ಲಕಂಭ ಪ್ರದರ್ಶನದಲ್ಲಿ ಪುಟಾಣಿ ಮಕ್ಕಳು ನೀಡಿದ ಮಲ್ಲಕಂಭ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಯಿತು. ಇದೇ ವೇಳೆ  ಹಾಸ್ಯನಟಿ ನಯನ ಮತ್ತು ತಂಡದಿಂದ ಮೂಡಿಬಂದ ಹಾಸ್ಯ ಪ್ರದರ್ಶನದಲ್ಲಿ ಪ್ರೇಕ್ಷಕರು ನಕ್ಕು ನಲಿದರು. ಅದರಲ್ಲೂ ನಯನ, ಅಪ್ಪಣ್ಣ, ಸೂರಜ್, ಹಿತೇಷ್, ಮಿಂಚು ಅವರ ಹಾಸ್ಯ ನಟನೆಗೆ ಪ್ರೇಕ್ಷಕರು ಶಿಳ್ಳೆಚಪ್ಪಾಳೆ ಹೊಡೆದು ಸಂಭ್ರಮಿಸಿದರು.
ನಟಿಯರಾದ ಗೌತಮಿ(ಸತ್ಯ), ಶುಭಾಪೊಂಜ, ರಂಜಿನಿ, ಭವ್ಯಗೌಡ ಅವರಿ ಹಲವು ಚಿಲನಚಿತ್ರ ಗೀತೆಗಳಿಗೆ ನೃತ್ಯ ಪ್ರದರ್ಶನ ನಡೆಯಿತು. ಎರಡನೇ ದಿನದ `ಪುನೀತೋತ್ಸವ’ ಕಾರ್ಯಕ್ರಮಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು. ರಾತ್ರಿ 12 ಗಂಟೆಯ ತನಕವೂ ಸಾರ್ವಜನಿಕರು ಕದಲದೆ ಕುಳಿತದ್ದು ಕಂಡುಬಂತು.
ಸಮಾರಂಭದಲ್ಲಿ ಸುಮಾರು 50 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. 

ಪ್ರೇರಣಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ದೀಪಬೆಳಗಿಸಿ ಕಾರ್ಯಕ್ರಮಕ್ಕೆ ಅರ್ಥಪೂರ್ಣ ಚಾಲನೆ

ದೀಪ ಬೆಳಗಿದ ಅಂಧ ಮಕ್ಕಳು ಎರಡನೇ ದಿನದ ವೇದಿಕೆ ಕಾರ್ಯಕ್ರಮವನ್ನು ಪ್ರೇರಣಾ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ದೀಪಬೆಳಗಿ ರಾಜಕುಮಾರ ಚಿತ್ರದ ಬೊಂಬೆ ಹೇಳುತೈತೆ ಎಂಬ ಹಾಡು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಅರ್ಥಪೂರ್ಣವಾಗಿ ಚಾಲನೆ ನೀಡಿದರು. 
ಈ ವೇಳೆ ಶಾಲೆಯ ಮುಖ್ಯಸ್ಥ ರವಿ ಮಾತನಾಡಿ, ಅಪ್ಪು ಅವರು ಸಮಾಜದ ಬಗ್ಗೆ ಸಾಕಷ್ಟು ಕಳಕಳಿ ಹೊಂದಿದ್ದ ಮಹಾನ್ ನಾಯಕ. ಅವರನ್ನು ಕಳೆದುಕೊಂಡು ನಾಡು ಬಡವಾಗಿದೆ. ಎಲ್ಲರ ಮನಸ್ಸಿನಲ್ಲೂ ಅವರು ಬದುಕಿದ್ದಾರೆ ಅಂಧ ಮಕ್ಕಳಿಂದ ಇಂತಹ ಅದ್ಧೂರಿ ಕಾರ್ಯಕ್ರಮವನ್ನು ಉದ್ಘಾಟಿಸಲು ಅವಕಾಶ ಮಾಡಿಕೊಟ್ಟ ಶಾಸಕ ಸಿ.ಎಸ್.ಪುಟ್ಟರಾಜು ಸಂಸ್ಥೆ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು