ಗೋಮುಖ ವ್ಯಾಘ್ರಗಳನ್ನು ಸೋಲಿಸಿ : ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಮನವಿ

ಮೈಸೂರು : ಹಿಂದುತ್ವದ ಹೆಸರಿನಲ್ಲಿ ದ್ವೇಷವನ್ನು ಹರಡುತ್ತಿರುವ ಎಲ್ಲಾ ಗೋಮುಖ ವ್ಯಾಘ್ರಗಳನ್ನು ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಲಿಸಬೇಕು ಎಂದು ಕಾಂಗ್ರೆಸ್ ಮುಖಂಡ, ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯ ಏಕರೂಪ ನಾಗರಿಕ ಸಂಹಿತೆ ತರುವ ವಿಚಾರ ಚುನಾವಣೆ ಹತ್ತಿರ ಬರುತ್ತಿದ್ದಂತೆ ದೇಶದ ಜನರನ್ನು ದಾರಿ ತಪ್ಪಿಸುವ ತಂತ್ರವಾಗಿದೆ. ಮೊದಲು ದೇಶದಲ್ಲಿ ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ಮತ್ತು ಅಲ್ಪಸಂಖ್ಯಾತರು ಸಾಮಾನ್ಯ ಜನರಂತೆ ಸಮಾನತೆಯಲ್ಲಿ ಬದುಕಲು ಅವಕಾಶ ಮಾಡಿ, ಅದನ್ನು ಬಿಟ್ಟು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡುತ್ತೇವೆ ಎಂದು ಬೊಗಳೆ ಬಿಡಬೇಡಿ. ನಿಮಗೆ ತಾಕತ್ತಿದ್ದತೆ ಸಂಸತ್ತಿನಲ್ಲಿ ಮಂಡಿಸಿ ಜಾರಿ ಮಾಡಿ ನೊಡೋಣ ಎಂದರು.  
ಬಳ್ಳಾರಿಯಲ್ಲಿ ಶ್ರೀರಾಮುಲು ವಿರುದ್ಧ 300 ಕೋಟಿ ಆಸ್ತಿ ಕಬಳಿಕೆ ದೂರು ದಾಖಲಾಗಿದೆ. ಇದರಲ್ಲಿ ಶ್ರೀರಾಮುಲು 6ನೇ ಆರೋಪಿಯಾಗಿದ್ದು, ಇವರ ವಿರುದ್ಧ 6 ಸಾವಿರ ಪುಟಗಳ ಚಾರ್ಜ್ ಶೀಟ್ ಸಲ್ಲಿಸ ಲಾಗಿದೆ. ಇಂದಿಗೂ ಶ್ರೀರಾಮುಲು ಜಾಮೀನಿನ ಮೇಲಿದ್ದಾರೆ ಎಂದು ವ್ಯಂಗ್ಯವಾಡಿದ ಉಗ್ರಪ್ಪ, ರಾಜ್ಯದಲ್ಲಿ ಸಚಿವರು, ಶಾಸಕರು ಸೇರಿದಂತೆ 16 ಜನ ಸಿಡಿ ಹಗರಣದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಪತ್ರಿಕೆಗಳಲ್ಲಿ ವರದಿ ಪ್ರಕಟಿಸದಂತೆ ಅವರು ತಡೆಯಾಜ್ಞೆಯನ್ನೂ ತಂದಿದ್ದಾರೆ. ಆರೋಗ್ಯ ಸಚಿವ ಡಿ.ಸುಧಾಕರ್ ವಿರುದ್ಧ ಪ್ರಕರಣ ದಾಖಲಿಸಲು ಜನ ಪ್ರತಿನಿಧಿಗಳ ನ್ಯಾಯಾಲಯ ನಿರ್ದೇಶನ ನೀಡಿದೆ. ಸಚಿವ ಆನಂದ್ ಸಿಂಗ್ ಮೇಲೂ ಎಫ್‍ಐಆರ್ ದಾಖಲಾಗಿದೆ. ಇದರ ಬಗ್ಗೆ ಮುಖ್ಯಮಂತ್ರಿಗಳು ಮಾತನಾಡಬೇಕು ಎಂದು ಆಗ್ರಹಿ ಸಿದರು.ಬಿಜೆಪಿಯವರು ಯಾವುದೇ ಅಭಿವೃದ್ಧಿ ಮಾಡದೆ ಹತಾಶರಾಗಿ ನಮ್ಮ ಪಕ್ಷದ ಅಧ್ಯಕ್ಷ ವಿರುದ್ಧ ಮಾತನಾಡುವುದು ಸರಿಯಲ್ಲ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ಜೆ.ವಿಜಯಕುಮಾರ್, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಕಾಂಗ್ರೆಸ್ ವಕ್ತಾರ ಮಹೇಶ್ ಇದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು