ಆರ್ಗ್ ಟ್ರೀ ಸಂಸ್ಥೆಯಿಂದ ರಾಜ್ಯಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನ
ನವೆಂಬರ್ 17, 2022
ಮೈಸೂರು : ಆರ್ಗ್ ಟ್ರೀ ಸಂಸ್ಥೆಯಿಂದ ನವೆಂಬರ್ ೨೦ ರಂದು ಮಂಡ್ಯ ಜಿಲ್ಲೆ, ಮಳವಳ್ಳಿ ತಾಲ್ಲೂಕು ತೆಂಕಹಳ್ಳಿ ಗ್ರಾಮದಲ್ಲಿ ರಾಜ್ಯಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ಸಂಸ್ಥೆಯ ಪ್ರಧಾನ ವ್ಯವಸ್ಥಾಪಕರಾದ ಮಂಜುನಾಥ್ ತಿಳಿಸಿದರು. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಆರ್ಗ್ ಟ್ರೀ ಸಂಸ್ಥೆಯು ಸಿರಿಧಾನ್ಯ ತಿನಿಸಿನ ತಯಾರಿಕಾ ಕಾರ್ಖಾನೆ ಹೊಂದಿದೆ. ಸಿರಿಧಾನ್ಯಗಳಿಂದ ಕ್ರಂಚಿಸ್, ಕುಕೀಸ್, ಬಿಸ್ಕೆಟ್ ಹಾಗೂ ಚಿಕ್ಕಿಗಳನ್ನು ತಯಾರಿಸಿ ರಾಜ್ಯಾದ್ಯಂತ ಮಾರುಕಟ್ಟೆಗೆ ೨೦೧೫ರಿಂದಲೂ ತಲುಪಿಸುತ್ತಿದೆ. ವಿಶ್ವಕ್ಕೆ ಮೊಟ್ಟ ಮೊದಲು ಸಿರಿಧಾನ್ಯಗಳಿಂದಲೇ ಕ್ರಂಚಿ ಹಾಗೂ ಕುಕೀಸ್ ಪರಿಚಯಿಸಿದ ಕಂಪನಿ ಆಗಿದ್ದು, ಸಿರಿಧಾನ್ಯ ಬೆಳೆದ ರೈತರಿಗೆ ನೇರ ಮಾರುಕಟ್ಟೆ ಒದಗಿಸಿ ಅವರಿಗೆ ಉತ್ತೇಜನ ನೀಡುತ್ತಿದೆ ಎಂದರು. ಸಿರಿಧಾನ್ಯಗಳು, ಮಳೆ, ಬರ, ಕ್ಷಾಮ ಎಲ್ಲವನ್ನೂ ಎದುರಿಸಿ ಪ್ರಕೃತಿದತ್ತವಾಗಿ ಬೆಳೆಯುತ್ತವೆ. ಜತೆಗೆ ಆರೋಗ್ಯಪೂರ್ಣ ಆಹಾರವಾಗಿದೆ. ಇದನ್ನು ಬೆಳೆಯಲು ಯಾವುದೇ ಗೊಬ್ಬರ, ಔಷದಿ ಬೇಡ. ರೈತರಿಗೆ ಮಧ್ಯವರ್ತಿಗಳು ಇಲ್ಲದೆ ಸ್ಥಳೀಯ ಮಾರುಕಟ್ಟೆಯನ್ನು ನಾವು ಸೃಷ್ಟಿಸಿದ್ದೇವೆ. ಜತೆಗೆ ನಮ್ಮ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗವನ್ನೂ ಸಹ ನೀಡುತ್ತಿದ್ದೇವೆ. ನಾವು ತಯಾರಿಸಿದ ಎಲ್ಲಾ ಉತ್ಪನ್ನಗಳು ರುಚಿಯಾಗಿದ್ದು, ಆರೋಗ್ಯಪೂರ್ಣವಾಗಿವೆ ಎಂದರು. ೨೦೨೩ ನೇ ವರ್ಷವನ್ನು ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ ಘೋಷಿಸಿದ ಹಿನ್ನಲೆ ಆರ್ಗ್ ಟ್ರೀ ಸಂಸ್ಥೆಯಿಂದ ರಾಜ್ಯಮಟ್ಟದ ಸಿರಿಧಾನ್ಯ ಕಾವ್ಯ ಸಮ್ಮೇಳನ ಏರ್ಪಡಿಸಲಾಗಿದೆ ಕಾರ್ಯಕ್ರಮದಲ್ಲಿ ಪದ್ಮಶ್ರೀ ಡಾ.ದೊಡ್ಡರಂಗೇಗೌಡ, ಶಾಸಕ ಡಾ.ಕೆ.ಅನ್ನದಾನಿ, ಹಿರಿಯ ಕವಿ ಡಾ.ಕೆ.ಸಿ.ಶಿವಪ್ಪ ಮುಂತಾದವರು ಭಾಗವಹಿಸಲಿದ್ದಾರೆ ಎಂದರು. ಸಾವಯವ ಕೃಷಿಕ ಪ್ರಸಾದ್, ಆಡಳಿತಾಧಿಕಾರಿ ಮಹೇಶ್ ಇದ್ದರು.
0 ಕಾಮೆಂಟ್‌ಗಳು