ಕಳಪೆ ಕಾಮಗಾರಿ : ಉದ್ಘಾಟನೆಗೊಂಡ ವಾರದಲ್ಲೇ ತುಕ್ಕು ಹಿಡಿದ ಶುದ್ಧ ಕುಡಿಯುವ ನೀರಿನ ಘಟಕ
ನವೆಂಬರ್ 13, 2022
ಪರಿಶಿಷ್ಟರ ಕಾಲೂನಿಯಲ್ಲಿರುವ ಕಾರಣ ರಿಪೇರಿಗೆ ನಿರ್ಲಕ್ಷ್ಯ : ಗ್ರಾಮಸ್ಥರ ಆರೋಪ
ಪಾಂಡವಪುರ : ಕಳೆದ 2 ವರ್ಷಗಳ ಹಿಂದೆ ತಾಲ್ಲೂಕಿನ ಲಕ್ಷ್ಮಿಸಾಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸಣಬ ಗ್ರಾಮದ ಪರಿಶಿಷ್ಟ ಜನಾಂಗದವರು ವಾಸಿಸುವ ಕಾಲೂನಿಯಲ್ಲಿ ನಿರ್ಮಿಸಿರುವ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆಯಾದ ವಾರದಲ್ಲೇ ತುಕ್ಕು ಹಿಡಿದು ಕುಸಿಯುವ ಹಂತಕ್ಕೆ ತಲುಪಿದರೂ ಕೇಳುವವರಿಲ್ಲವಾಗಿದ್ದಾರೆ. ಘಟಕ ಸ್ಥಾಪಿಸಿ, ಪಂಚಾಯ್ತಿ ಸುಪರ್ದಿಗೂ ಒಪ್ಪಿಸದೆ ಗುತ್ತಿಗೆದಾರ ಹಣ ಪಡೆದು ಪರಾರಿಯಾಗಿದ್ದಾನೆ ಎಂದು ಇಲ್ಲಿನ ಜನರು ಆರೋಪಿಸುತ್ತಾರೆ.
ಇನ್ನು ಘಟಕದ ಒಳಗೆ ಸ್ಟೀಲ್ ಟ್ಯಾಂಕ್ ಸೇರಿದಂತೆ ಎಲ್ಲಾ ಉಪಕರಣಗಳು ತುಕ್ಕು ಹಿಡಿದಿವೆ. ಸಿವಿಲ್ ಕಾಮಗಾರಿಯೂ ಗುಣಮಟ್ಟದಲ್ಲಿಲ್ಲ. ಯಂತ್ರೋಪಕರಣಗಳೂ ತುಕ್ಕು ಹಿಡಿದಿವೆ. ವಿದ್ಯುತ್ ಕಾಮಗಾರಿಯೂ ಕಳಪೆ ಗುಣಮಟ್ಟದಿಂದ ಕೂಡಿದ್ದು, ಸ್ವಿಚ್ ಆನ್ ಮಾಡಿದರೆ, ಇಡೀ ಘಟಕಕ್ಕೆ ವಿದ್ಯುತ್ ಪ್ರವಹಿಸಿ ಶಾಕ್ ಹೊಡೆಯುತ್ತದೆ. ಶಾರ್ಟ್ ಸಕ್ರ್ಯೂಟ್ ಆಗಿ ದೊಡ್ಡ ಮಟ್ಟದ ಅಪಾಯವೂ ಉಂಟಾಗಬಹುದು ಎಂಬ ಕಾರಣಕ್ಕೆ ವಿದ್ಯುತ್ ಸಂಪರ್ಕ ಕಡಿತ ಮಾಡಲಾಗಿದೆ. ಘಟಕವು ಪರಿಶಿಷ್ಟ ಜನಾಂಗದವರ ಕಾಲೂನಿಯಲ್ಲಿದೆ ಎಂಬ ಕಾರಣಕ್ಕಾಗಿ 2 ವರ್ಷಗಳಿಂದಲೂ ಇದರ ಬಗ್ಗೆ ಎಲ್ಲರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ಗ್ರಾಮಸ್ಥರು ಆರೋಪಿಸುತ್ತಾರೆ.
40 ಪರ್ಸೆಂಟ್ ಕಮೀಷನ್ : ಗುತ್ತಿಗೆದಾರ ಗ್ರಾಮದಲ್ಲಿ ಈ ಘಟಕ ಸ್ಥಾಪಿಸುವಾಗ ಯಾವೊಬ್ಬ ಅಧಿಕಾರಿಯಾಗಲೀ, ಜನ ಪ್ರತಿನಿಧಿಯಾಗಲೀ ಬಂದು ನಿರ್ದೇಶನ ನೀಡಿಲ್ಲ. ಇದರ ಗುಣಮಟ್ಟ ಪರಿಶೀಲಿಸಿಲ್ಲ. ಅಥವಾ 2 ವರ್ಷವಾದರೂ ಇದನ್ನು ಪಂಚಾಯ್ತಿಗೆ ಒಪ್ಪಿಸದೆ ಸಾರ್ವಜನಿಕರ ಉಪಯೋಗಕ್ಕೂ ನೀಡದೆ ಇರುವುದಕ್ಕೆ ಕಾರಣವನ್ನೂ ಕೇಳಿಲ್ಲ. ಎಲ್ಲರೂ ಈ ಕಳಪೆ ಕಾಮಗಾರಿಯ ಪಾಲುದಾರರು. ಸರ್ಕಾರ ಬಡವರು, ಪರಿಶಿಷ್ಟ ಜನಾಂಗದವ ಆರೋಗ್ಯದ ಕಾಪಾಡಲು ಇಂತಹ ಯೋಜನೆ ರೂಪಿಸಿದರೆ, ಅಧಿಕಾರಿಗಳು, ಜನ ಪ್ರತಿನಿಧಿಗಳು ಕುಡಿಯುವ ನೀರಲ್ಲೂ ಕಮೀಷನ್ ಹೊಡೆಯುವುದು ಅಮಾನವೀಯ ಈ ಕಾಮಗಾರಿಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆದಿದೆ ಎನ್ನುವುದಕ್ಕೆ ಘಟಕವೇ ಸಾಕ್ಷಿಯಾಗಿದೆ. ಸಂಬಂಧಪಟ್ಟವರು ಕೂಡಲೇ ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ಈ ಘಟಕವನ್ನು ಗ್ರಾಮಸ್ಥರ ಉಪಯೋಗಕ್ಕೆ ಕೊಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
0 ಕಾಮೆಂಟ್‌ಗಳು