ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಪ್ರಕರಣ : ದೂರುದಾರ ಮಕ್ಕಳ ಪೋಷಕರ ಬಂಧನಕ್ಕೆ ಖಂಡನೆ, ಸ್ವಾಮೀಜಿ ಮಂಪರು ಪರೀಕ್ಷೆಗೆ ಒತ್ತಾಯಿಸಿ ಮೈಸೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ

ಅತ್ಯಾಚಾರಕ್ಕೆ ಒಳಗಾದ ಮಕ್ಕಳೊಂದಿಗೆ ನಾವಿದ್ದೇವೆ ಎಂದು ಘೋಷಿಸಿದ ವಿವಿಧ ಸಂಘಟನೆಗಳು

ಮೈಸೂರು : ಚಿತ್ರದುರ್ಗದ ಮುರುಘಾ ಶರಣರ ಲೈಂಗಿಕ ದೌರ್ಜನ್ಯ ಆರೋಪಕ್ಕೆ ಸಂಬಂಧಿಸಿದಂತೆ ಪೊಲೀಸರು ದೂರುದಾರರನ್ನೇ ಬಂಧಿಸಿರುವುದು ಕಳವಳಕಾರಿಯಾಗಿದ್ದು, ಕೂಡಲೇ ಸರ್ಕಾರ ಸ್ವಾಮೀಜಿಯನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು. ಜತೆಗೆ ನಾವು ದೂರು ನೀಡಿರುವ ಮಕ್ಕಳ ಪರವಾಗಿದ್ದೇವೆ ಎಂದು ನಗರದಲ್ಲಿ ಒಡನಾಡಿ ಸಂಸ್ಥೆಯ ಮಕ್ಕಳ ನೇತೃತ್ವದಲ್ಲಿ ರೈತಸಂಘ, ದಲಿತ ಸಂಘಟನೆಗಳು ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಕೋರ್ಟ್ ಮುಂಭಾಗದ ಮಹಾತ್ಮಾಗಾಂಧಿ ಪ್ರತಿಮೆ ಎದುರು ಜಮಾಯಿಸಿದ ದಸಂಸ, ರೈತಸಂಘ, ಮಹಿಳಾ ಸಂಘಟನೆಗಳು ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳ ಮುಖಂಡರು ಒಡನಾಡಿ ಸಂಸ್ಥೆಯ ಮಕ್ಕಳ ನೇತೃತ್ವದಲ್ಲಿ ಭಾರಿ ಪ್ರತಿಭಟನಾ ಮೆರವಣಿಗೆ ನಡೆಸಿ ದಾರಿಯುದ್ದಕ್ಕೂ ಸರ್ಕಾರ, ಪೊಲೀಸರು ಮತ್ತು ವ್ಯವಸ್ಥೆಯ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರಗತಿಪರ ಚಿಂತಕ ಪ.ಮಲ್ಲೇಶ್ ಮಾತನಾಡಿ, ಬೇಲಿಯೇ ಎದ್ದು ಹೊಲ ಮೇಯ್ತು ಎನ್ನುವ ಗಾದೆ ಮಾತಿನಂತೆ ಸಮಾಜದಲ್ಲಿ ಮೌಲ್ಯಗಳನ್ನು ಪ್ರತಿಷ್ಠಾಪಿಸಿ ಸಮುದಾಯಕ್ಕೆ ದಾರಿ ದೀಪವಾಗಬೇಕಾದ ಸ್ವಾಮೀಜಿಯೇ ಘೋರವಾದ ಅನ್ಯಾಯ ಮಾಡಿದ್ದಾರೆ. ಚಿತ್ರದುರ್ಗದ ಮುರುಘಾ ಮಠ ಜಂಗಮ ಮಠವಾಗಿದ್ದು, ಅತ್ಯಂತ ಪವಿತ್ರವಾದ ಕ್ಷೇತ್ರ. ಹಲವಾರು ಸ್ವಾಮೀಜಿಗಳು ಇಲ್ಲಿ ಮಠದ ಪರಂಪರೆಗೆ ಕಟಿಬದ್ಧರಾಗಿ ಕೆಲಸ ಮಾಡಿದ್ದಾರೆ. ಆದರೇ, ಡಾ.ಶಿವಮೂರ್ತಿ ಸ್ವಾಮೀಜಿ ಮುರುಘಾ ಮಠಕ್ಕೆ ಕಳಂಕ ತಂದಿದ್ದಾರೆ. ಇವರ ಲೈಂಗಿಕ ಹಗರಣ ಒಂದೋ, ಎರಡೋ ಹಲವಾರು ವರ್ಷಗಳಿಂದಲೂ ಇವರು ಅಪ್ರಾಪ್ತ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆ. ಸರ್ಕಾರ ಮತ್ತು ಪೊಲೀಸರು ಇವರ ವಿರುದ್ಧ ಸೂಕ್ತ ಆರೋಪ ಪಟ್ಟಿ ಸಿದ್ದಪಡಿಸುವುದನ್ನು ಬಿಟ್ಟು ವಿಚಾರಣೆ ಹೆಸರಲ್ಲಿ ಸ್ವಾಮೀಜಿಗೆ ಐಶಾರಾಮಿ ಸವಲತ್ತು ನೀಡಿರುವುದಲ್ಲದೇ, ದೂರುದಾರ ಮಕ್ಕಳ ಪೋಷಕರನ್ನು ಮತ್ತು ಇವರಿಗೆ ದೂರು ನೀಡಲು ಸಹಕರಿಸಿದ ಬಸವರಾಜ್ ಎಂಬವರನ್ನು 6 ದಿನಗಳ ಹಿಂದೆಯೇ ವಶಕ್ಕೆ ಪಡೆದು ಇನ್ನೂ ಬಿಟ್ಟಿಲ್ಲ. ಇದು ಆತಂಕದ ವಿಷಯವಾಗಿದ್ದು, ಇವುಗಳೆಲ್ಲವನ್ನೂ ನೋಡುತ್ತಿದ್ದರೇ, ಸರ್ಕಾರ ಆರೋಪಿ ಸ್ವಾಮೀಜಿ ಪರವಾಗಿದೆ ಎಂದು ಕಿಡಿಕಾರಿದರು.
ಒಡನಾಡಿ ಸಂಸ್ಥೆಯ ಮುಖ್ಯಸ್ದ ಸ್ಟ್ಯಾನ್ಲಿ ಮಾತನಾಡಿ, ಸರ್ಕಾರ ಈ ಪ್ರಕರಣದ ಉನ್ನತ ಮಟ್ಟದ ತನಿಖೆ ನಡೆಸಬೇಕು. ನಾವು ದೂರುದಾರ ಮಕ್ಕಳು ಮತ್ತು ಅವರ ಪೋಷಕರ ಪರವಾಗಿದ್ದೇವೆ. ಅವರ ವೆಚ್ಚಕ್ಕಾಗಿ ಎಲ್ಲರಿಂದಲೂ ಕನಿಷ್ಠ ಒಂದು ರೂಪಾಯಿಯಾದರೂ ಸಂಗ್ರಹಿಸಿ ಅವರಿಗೆ ತಲುಪಿಸುತ್ತೇವೆ ಎಂದು ಗೋಲಕದಲ್ಲಿ ಹಣ ಸಂಗ್ರಹಿಸಿದರು.

ನಂತರ ಪ್ರತಿಭಟನಾ ಮೆರವಣಿಗೆ ಕೋರ್ಟ್ ಮುಂಭಾಗದಿಂದ ಆರ್‍ಟಿಓ ವೃತ್ತದ ಮೂಲಕ ಮಹಾರಾಣಿ ಕಾಲೇಜು ನಂತರ ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಸರ್ಕಾರಕ್ಕೆ, ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಹೋರಾಟಗಾರರಾದ ಮಾಜಿ ಮೇಯರ್‍ಗಳಾದ ನಾರಾಯಣ್, ಪುರುಷೋತ್ತಮ್ ಹೊಸಕೋಟೆ ಬಸವರಾಜು, ವಕೀಲ ಪುನೀತ್, ಗೋಪಾಲಕೃಷ್ಣ, ಚೋರನಹಳ್ಳಿ ಶಿವಣ್ಣ, ಮರಂಕಯ್ಯ, ಉಗ್ರ ನರಸಿಂಹೇಗೌಡ, ಪ್ರೊ.ವನಜಾ, ಪ್ರೊ.ಕಾಳಚನ್ನೇಗೌಡ, ಆಲಗೋಡು ಶಿವಕುಮಾರ್, ಸಿ.ಬವಲಿಂಗಯ್ಯ, ಸೈಯದ್ ಕಲೀಂ, ಹೊಸೂರು ಕುಮಾರ್, ಹೆಜ್ಜಿಗೆ ಪ್ರಕಾಶ್, ಬೆಳ್ಳಾಳೆ ಬೆಟ್ಟೇಗೌಡ, ರತಿರಾವ್, ಕುಮಾರಸ್ವಾಮಿ, ಚಂದ್ರಶೇಖರ ಮೇಟಿ, ಕಲ್ಲಳ್ಳಿ ಕುಮಾರ್, ಭಾಗ್ಯಮ್ಮ, ಗೋವಿಂದರಾಜು ಇನ್ನಿತರರು ಇದ್ದರು.
 

ಸ್ವಾಮೀಜಿಗಳು ಬೇಕಿದ್ದರೆ ಮದುವೆಯಾಗಿ

ಬಹಳಷ್ಟು ಸ್ವಾಮೀಜಿಗಳು ಲೈಂಗಿಕ ದೌರ್ಜನ್ಯ ಆರೋಪ ಎದುರಿಸುತ್ತಿದ್ದಾರೆ. ಚಿಕ್ಕ ಚಿಕ್ಕ ಮಕ್ಕಳ ಮೇಲೆ ಅತ್ಯಾಚಾರ, ದೌರ್ಜನ್ಯ ಎಸಗುತ್ತಿರುವುದು ನಾಚಿಕೆಗೇಡು. ಸ್ವಾಮೀಜಿಗಳು ಬೇಕಿದ್ದರೇ ಮದುವೆಯಾಗಿ. ಬಸವಣ್ಣನವರೇ ಮದುವೆಯಾಗಿದ್ದ ನಿದರ್ಶನ ನಮ್ಮ ಮುಂದಿದೆ. ಕಾವಿ ಧರಿಸಿ ಮೃಗಗಳ ರೀತಿ ವರ್ತಿಸುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ.

-   ಸಿ,ಬಸವಲಿಂಗಯ್ಯ, ಖ್ಯಾತ ರಂಗಕರ್ಮಿ, ರಂಗಾಯಣ ಮಾಜಿ ನಿರ್ದೇಶಕ
 

ಮೃಗಗಳೂ ಸಹ ಈ ರೀತಿ ವರ್ತಿಸುವುದಿಲ್ಲ

ಮೃಗಗಳೂ ಸಹ ತಮಗಿಂತ ಚಿಕ್ಕವರ ಜತೆ ಲೈಂಗಿಕತೆ ನಡೆಸುವುದಿಲ್ಲ. ಮನುಷ್ಯರು ಮೃಗಗಳಿಗಿಂತ ಕಡೆಯಾಗಿದ್ದಾರೆ. ಸಣ್ಣ ಸಣ್ಣ ಕಂದಮ್ಮಗಳ ಮೇಲೆ ಅತ್ಯಾಚಾರ ನಡೆಸಿರುವುದು ನಾಚಿಕೆಗೇಡು.

-ಸುಲೇಖಾ, ಲೇಖಕಿ.  



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು