ವಿಷ ಕುಡಿದು ರೈತ ಸಾವು : ಬ್ಯಾಂಕಿನ ಮುಂದೆ ಶವವಿಟ್ಟು ಪ್ರತಿಭಟನೆ
ನವೆಂಬರ್ 23, 2022
ಮೈಸೂರು : ಬೆಳೆ ಸಾಲ ನಿರಾಕರಿಸಿದ ಹಿನ್ನೆಲೆ ಬ್ಯಾಂಕಿನಲ್ಲೇ ಕೀಟನಾಶಕ ಸೇವಿಸಿ ಸಾವೀಗೀಡಾದ ರೈತನ ಶವವನ್ನು ಬುಧವಾರ ಸಂಜೆ ಹೆಚ್.ಡಿ.ಕೋಟೆ ತಾಲ್ಲೂಕು ಹೊಸಹೊಳಲು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕಿನ ಮುಂದೆ ಇರಿಸಿ ಪ್ರತಿಭಟನೆ ನಡೆಸಲಾಯಿತು. ಸಾಲ ನೀಡುವುದಾಗಿ ಹೇಳಿದ್ದ ಬ್ಯಾಂಕ್ ವ್ಯವಸ್ಥಾಪಕರು ರೈತನಿಂದ ತಿಂಗಳ ಹಿಂದೆ ಎಲ್ಲಾ ದಾಖಲೆ ಪಡೆದು ನಂತರ ಕಳೆದ ಸೋಮವಾರ ಸಾಲ ನೀಡಲು ಸಾಧ್ಯವಿಲ್ಲ ಎಂದಾಗ ಬೇಸತ್ತ ರೈತ ನಿಂಗೇಗೌಡ ಬ್ಯಾಂಕಿನಲ್ಲೇ ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದರು. ನಂತರ ಅವರನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಇಂದು ಬೆಳಿಗ್ಗೆ ಮೃತಪಟ್ಟರು. ಶವದ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಪಡೆದ ವಾರಸುದಾರರು ರೈತ ಮುಖಂಡರ ನೇತೃತ್ವದಲ್ಲಿ ಹೊಸಹೊಳಲು ಗ್ರಾಮದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಮುಂದಿಟ್ಟು ಪ್ರತಿಭಟನೆ ನಡೆಸಿದರು. ಈ ವೇಳೆ ರೈತ ಮುಖಂಡರು ಮಾತನಾಡಿ, ರೈತರು ಬ್ಯಾಂಕ್ ಅಧಿಕಾರಿ ಜತೆ ಜಗಳ ಮಾಡಿ ಅವರೇನಾದರೂ ಈ ರೀತಿ ಮಾಡಿಕೊಂಡಿದ್ದರೇ ನಮ್ಮ ಮೇಲೆ ಕೊಲೆ ಕೇಸು ದಾಖಲಿಸಲಾಗುತ್ತಿತ್ತು. ಈಗ ಬ್ಯಾಂಕ್ ಅಧಿಕಾರಿ ನಿರ್ಲಕ್ಷ್ಯದಿಂದ ರೈತರು ಮೃತಪಟ್ಟಿದ್ದಾರೆ. ಬ್ಯಾಂಕ್ ಅಧಿಕಾರಿ ವಿರುದ್ಧ ಕೊಲೆ ಕೇಸು ದಾಖಲಿಸುವಂತೆ ಪಟ್ಟು ಹಿಡಿದರು. ಈ ವೇಳೆ ಎಚ್.ಡಿ.ಕೋಟೆ ತಹಸಿಲ್ದಾರರು ಮಧ್ಯ ಪ್ರವೇಶಿಸಿ ಮೃತ ರೈತನ ಕುಟುಂಬಕ್ಕೆ ಪರಿಹಾರ ಮತ್ತು 2 ಸಾವಿರ ರೂ. ಮಾಶಾಸನ ಕೊಡಿಸುವ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದು ಮೃತ ರೈತನ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
0 ಕಾಮೆಂಟ್‌ಗಳು