ಪ,ಮಲ್ಲೇಶ್ ವಿರುದ್ಧ ಪ್ರತಿಭಟಿಸಿದವರು ದಲಿತ ಮಹಿಳೆ ನಲ್ಲಿ ನೀರು ಕುಡಿದರೆಂದು ಟ್ಯಾಂಕ್ ಖಾಲಿ ಮಾಡಿ ಗಂಜಲದಿಂದ ತೊಳೆದವರ ವಿರುದ್ಧ ಮಾತನಾಡಲಿಲ್ಲವೇಕೆ? : ಪುಟ್ಟನಂಜಯ್ಯ

ಮೈಸೂರು : ಬಹುತ್ವದ ಭಾರತದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಮೊದಲಾದವರ ಚರಿತ್ರೆಯನ್ನೇ ತಿರುಚುವುದರ ವಿರುದ್ಧ ಯಾರೂ ಧ್ವನಿಯೆತ್ತಲಿಲ್ಲ. ಆದರೆ ಪ.ಮಲ್ಲೇಶ್ ಅವರು ಬ್ರಾಹ್ಮಣ್ಯೀಕರಣದ ಬಗ್ಗೆ ಮಾತನಾಡಿದಾಗ ಬೀದಿಗಿಳಿದು ಪ್ರತಿಭಟಿಸಿರುವುದು ಬೇಸರದ ಸಂಗತಿ ಎಂದು ಎಸ್‍ಡಿಪಿಐ ಮುಖಂಡ ಪುಟ್ಟನಂಜಯ್ಯ ಕಿಡಿ ಕಾರಿದರು.
ದಲಿತ ವೆಲ್ಫೇರ್ ಟ್ರಸ್ಟ್ ವತಿಯಿಂದ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಶಾಸಕರೊಬ್ಬರನ್ನು ಅಟ್ಟಿಸಿಕೊಂಡು ಹೋಗಿ ಹೊಡೆಯುತ್ತಾರೆಂದರೆ, ಇಲ್ಲಿ ಪ್ರಜಾಪ್ರಭುತ್ವವನ್ನು ಬುಡಮೇಲು ಮಾಡುವ ಕೆಲಸ ನಡೆಯುತ್ತಿದೆ ಎಂದರ್ಥ. ಜತೆಗೆ ಮಹಿಳೆಯೊಬ್ಬರು ನಲ್ಲಿಯಿಂದ ನೀರು ಕುಡಿದರೆಂದು ಟ್ಯಾಂಕ್ ನೀರನ್ನು ಬರಿದು ಮಾಡಿ ಶುದ್ಧೀಕರಿಸಿದ ಘಟನೆ ಸಹಾ ನಡೆದಿದೆ. ಆದರೆ ಪ.ಮಲ್ಲೇಶ್ ವಿರುದ್ಧ ಪ್ರತಿಭಟಿಸಿದವರು ಈ ಘಟನೆ ಬಗ್ಗೆ ಏಕೆ ಧ್ವನಿ ಎತ್ತಲಿಲ್ಲ ಎಂದು ಪ್ರಶ್ನಿಸಿದರು.
ಪ.ಮಲ್ಲೇಶ್ ಅವರು ಕ್ಷಮೆ ಯಾಚಿಸಿರುವ ಕಾರಣ ವಿವಾದ ಮುಂದುವರಿಸಿಕೊಂಡು ಹೋಗುವುದು ಸರಿಯಲ್ಲ ಎಂದರು.
ಟ್ರಸ್ಟ್ ಅಧ್ಯಕ್ಷ ಶಾಂತರಾಜು ಮಾತನಾಡಿ, ಪ.ಮಲ್ಲೇಶ್ ಅವರು ಸಮಾಜವಾದಿಯಾಗಿದ್ದು, ಬಸವಣ್ಣನವರ ಅನುಯಾಯಿಯಾಗಿದ್ದಾರೆ. ಜತೆಗೆ ಬದ್ಧತೆಯಿಂದ ಹೋರಾಟ ಮಾಡುತ್ತಿರುವವರಾಗಿದ್ದಾರೆ. ನಾವು ಬ್ರಾಹ್ಮಣರ ವಿರೋಧಿಯಲ್ಲ. ಆದರೆ, ಬ್ರಾಹ್ಮಣ್ಯದ ಆಚಾರ ವಿಚಾರ ವಿರೋಧಿಸುತ್ತೇವೆ. ಪ.ಮಲ್ಲೇಶ್ ವಿರುದ್ಧ ಪ್ರತಿಭಟಿಸಿದವರು ಅಸ್ಪೃಶ್ಯತೆ ಆಚರಣೆ ವಿರುದ್ಧ ಮಾತನಾಡಿದ್ದಾರೆಯೇ ಎಂದು ಪ್ರಶ್ನಿಸಿದರು.
ಗೋಷ್ಠಿಯಲ್ಲಿ ಆರ್.ಸಿದ್ದಪ್ಪ, ಚಿಕ್ಕಂದಾನಿ ಹಾಜರಿದ್ದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು