`ಮಲ್ಲಿಕಾರ್ಜುನ ಖರ್ಗೆಯವರಿಂದ ದಲಿತ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ’

ಬಿಎಸ್‍ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಟೀಕೆ

-ನಜೀರ್ ಅಹಮದ್, ಪಾಂಡವಪುರ

ಮೈಸೂರು : ರಾಹುಲ್ ಗಾಂಧಿಗೆ ಜನ ಓಟು ಕೊಡಲ್ಲಾಂತ ಕಾಂಗ್ರೆಸ್ಸಿನವರು ಮಲ್ಲಿಕಾರ್ಜುನ ಖರ್ಗೆಯವರನ್ನು ಎಐಸಿಸಿ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಆದರೆ ಖರ್ಗೆಯವರಿಂದ ದಲಿತ ಸಮಾಜಕ್ಕೆ ಯಾವುದೇ ಪ್ರಯೋಜನವಿಲ್ಲ ಎಂದು ಬಹುಜನ ಸಮಾಜ ಪಕ್ಷದ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಟೀಕಿಸಿದರು.
ಮೈಸೂರಿನ ಗಾಂಧಿನಗರದ ಅಂಬೇಡ್ಕರ್ ವೃತ್ತದಲ್ಲಿ ಜೈ ಭೀಮ್ ಜನ ಜಾಗೃತಿ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿ, ಮಲ್ಲಿಕಾರ್ಜುನ ಖರ್ಗೆಯವರನ್ನು ಅಧ್ಯಕ್ಷರನ್ನಾಗಿ ಮಾಡಿದರೆ ದಲಿತರ ಮತಗಳು ಪಕ್ಷಕ್ಕೆ ಬರುತ್ತವೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರೆ ಅದು ತಪ್ಪು. ಎಲ್ಲಾ ದಲಿತರು ಖರ್ಗೆಯವರಲ್ಲ ದಲಿತರನ್ನು ಯಾಮಾರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ.
ಖರ್ಗೆಯವರು ತಮ್ಮ ವೈಯುಕ್ತಿಕ ಲಾಭಕ್ಕಾಗಿ ಅಲ್ಲಿದ್ದಾರೆ ವಿನಹ ಅವರಿಂದ ಕಾಂಗ್ರೆಸ್ ಪಕ್ಷಕ್ಕಾಗಲೀ, ದಲಿತ ಸಮಾಜಕ್ಕಾಗಲಿ ಯಾವುದೇ ಪ್ರಯೋಜನವಿಲ್ಲ ಎಂದರು.
ಅಶೋಕ್ ಗೆಹ್ಲೋಟ್ ಅಂತಹವರೇ ಎಐಸಿಸಿ ಅಧ್ಯಕ್ಷರಾಗಲು ನಿರಾಕರಿಸಿ ಮುಖ್ಯಮಂತ್ರಿಯಾಗಿ ಉಳಿದುಕೊಂಡರು. ಆದರೆ, ನಮ್ಮ ಮಲ್ಲಿಕಾರ್ಜುನ ಖರ್ಗೆಯವರಿಗೆ ಮುಖ್ಯಮಂತ್ರಿ ಹುದ್ದೆಯ ಶಕ್ತಿ ಮತ್ತು ಎಐಸಿಸಿ ಅಧ್ಯಕ್ಷರ ಸ್ಥಾನದ ಶಕ್ತಿಗೂ ಇರುವ ವ್ಯತ್ಯಾಸ ಗೊತ್ತಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ಅಥವಾ ಕಾಂಗ್ರೆಸ್ ಪಕ್ಷ ಯಾವಾಗ ಬಹುಮತ ಪಡೆಯುತ್ತದೋ ಆಗ ಮಲ್ಲಿಕಾರ್ಜುನ ಖರ್ಗೆಯವರೇ ಪ್ರಧಾನ ಮಂತ್ರಿ ಎಂದು ಘೋಷಿಸಲಿ ಎಂದು ಸವಾಲು ಹಾಕಿದರು.
ಕಾಂಗ್ರೆಸ್ ಪಕ್ಷ ಯಾವತ್ತಿದ್ದರೂ ದಲಿತರಿಗೆ ಕಂಟಕ, ನಮಗೆ ಅದೊಂದು ಉರಿಯುತ್ತಿರುವ ಬೆಂಕಿಯ ಮನೆ ಎಂದು ಬಾಬಾ ಸಾಹೇಬರು ಹಿಂದೆಯೇ ಹೇಳಿದ್ದಾರೆ. ಯಾರೋ ಖರ್ಗೆಯವರಂತಹ ಅವಕಾಶವಾದಿಗಳು ಅಲ್ಲಿರುತ್ತಾರೆ ವಿನಹ ನಿಜವಾದ ಅಂಬೇಡ್ಕರ್ ಅನುಯಾಯಿ ದಲಿತರು ಕಾಂಗ್ರೆಸ್ ಪಕ್ಷವನ್ನು ಯಾವತ್ತೂ ಕ್ಷಮಿಸುವುದಿಲ್ಲ ಎಂದರು.

ಅತ್ಯಂತ ನಿಷ್ಠೆಯಿಂದ ಕಾಂಗ್ರೆಸ್ ಪಕ್ಷದಲ್ಲಿದ್ದ ಜಗಜೀವನರಾಮ್ ಅವರು ಪ್ರಧಾನಿಯಾಗುವ ಇಂಗಿತ ವ್ಯಕ್ತಪಡಿಸಿದಾಗ ಕಾಂಗ್ರೆಸ್ ಅವಕಾಶ ಕೊಡಲಿಲ್ಲ. ಇದರಿಂದ ಅವರು ಪಕ್ಷ ಬಿಟ್ಟು ಹೊರಬಂದರು. ಆದರೆ, ಖರ್ಗೆಯವರಿಗೆ ಮೂರ್ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗುವ ಅವಕಾಶ ಇದ್ದರೂ ಕಾಂಗ್ರೆಸ್ ಪಕ್ಷ ಅವರನ್ನು ಮುಖ್ಯಮಂತ್ರಿ ಮಾಡಲಿಲ್ಲ. ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆಗೂ ಉತ್ತರಿಸಿದ ಕೃಷ್ಣಮೂರ್ತಿ, ಒಂದು ಮುಖ್ಯಮಂತ್ರಿ ಹುದ್ದೆಗೆ ಖರ್ಗೆ ಅನ್‍ಫಿಟ್ ಆಗಿರಬೇಕು. ಅಥವಾ ಅವರನ್ನು ಮುಖ್ಯಮಂತ್ರಿ ಮಾಡಲು ಆಗದ ಕಾಂಗ್ರೆಸ್ ಪಕ್ಷವೇ ಅನ್ ಫಿಟ್ ಆಗಿದೆ. ಇಂತಹ ಅನ್‍ಫಿಟ್ ಪಾರ್ಟಿಯ ಅನ್‍ಫಿಟ್ ವ್ಯಕ್ತಿಯನ್ನು ತನ್ನ ಪಕ್ಷದ ಅಧ್ಯಕ್ಷರನ್ನಾಗಿಸಿದೆ. ಇಷ್ಟೆಲ್ಲಾ ಆದರೂ ಖರ್ಗೆಯವರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಇದು ಅವರ ನಿಷ್ಠೆ ಎಂದರು.
ಕಾಂಗ್ರೆಸ್ ಪಕ್ಷದ ಭಾರತ್ ಜೋಡೋ ಯಾತ್ರೆ ಕುರಿತು ಮಾತನಾಡಿದ ಕೃಷ್ಣಮೂರ್ತಿ, ಕಾಂಗ್ರೆಸ್ ಪಕ್ಷ ಈಗ ಭಾರತವನ್ನು ಜೋಡಿಸಲು ಹೊರಟಿದೆ ಹಾಗಾದರೆ ಅದನ್ನು ಒಡೆದವರು ಯಾರು? ಇನ್ನೂ ಜೆಡಿಎಸ್‍ನ ಪಂಚಮಂತ್ರ ಯಾತ್ರೆ ಕುರಿತು, ಇದು ಪಂಚ ಕುತಂತ್ರ ಎಂದು ಲೇವಡಿ ಮಾಡಿದರು. ಬಿಜೆಪಿಯ ಜನ ಸಂಕಲ್ಪ ಯಾತ್ರೆ ಇದೊಂದು ಹಾಸ್ಯಾಸ್ಪದ. ಕರ್ನಾಟದಲ್ಲಿ 40 ಪರ್ಸೆಂಟ್ ಇದ್ರೆ ಗುಜರಾತಿನಲ್ಲಿ 94 ಪರ್ಸೆಂಟ್ ಕಮೀಷನ್ ನಡೆಯುತ್ತಿದೆ. ಅದಕ್ಕೆ ಇತ್ತೀಚೆಗೆ ಮುರಿದು ಬಿದ್ದ ತೂಗು ಸೇತುವೆಯೇ ಸಾಕ್ಷಿ. ಸೇತುವೆ ರಿಪೇರಿಗೆ 2 ಕೋಟಿ ಮಂಜೂರಾದರೆ, 12 ಲಕ್ಷದಲ್ಲಿ ರಿಪೇರಿ ಮಾಡಿದ್ದಾರೆ. ಇದರಿಂದ ನೂರಾರು ಜನ ಪ್ರಾಣ ಕಳೆದುಕೊಳ್ಳುವಂತಾಯಿತು ಎಂದರು. 
ಮೈಸೂರು ಜಿಲ್ಲೆ ಸೇರಿದಂತೆ ಹಲವು ಕಡೆ ಪದಾಧಿಕಾರಿಗಳ ಬದಲಾವಣೆಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷ್ಣಮೂರ್ತಿ, ಒಂದು ಚಲನಶೀಲ ರಾಜಕೀಯ ಪಕ್ಷದಲ್ಲಿ ಬದಲಾವಣೆ ನಡೆಯುತ್ತಿರಬೇಕು. ಅದು ಸಹಜ ಎಂದರು. 
ಇದುವರೆಗೂ ದೇಶದಲ್ಲಿ ಆಡಳಿತ ನಡೆಸಿದ ಪಕ್ಷಗಳು ಸಂವಿಧಾನವನ್ನು ಯಥಾವತ್ತಾಗಿ ಜಾರಿ ಮಾಡಿದ್ದಿದ್ದರೆ, ಇಂದು ದೇಶದಲ್ಲಿ ನಿರುದ್ಯೋಗವೇ ಇರುತ್ತಿರಲಿಲ್ಲ. ದೇಶ ಸುಭೀಕ್ಷವಾಗಿರುತ್ತಿತ್ತು. ಜಾತಿ, ಧರ್ಮ ಎಂದು ನಮ್ಮ ನಮ್ಮಲ್ಲೆ ಬೆಂಕಿ ಹಚ್ಚಿ ರಾಜಕೀಯ ಮಾಡುತ್ತಿರುವ ಕಾರಣ ಭಾರತ ಇಂದು ಹಸಿವಿನ ಸೂಚ್ಯಂಕದಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶಕ್ಕಿಂತಲೂ ಕಳಪೆ ಮಟ್ಟದಲ್ಲಿದೆ. ಈ ಕಾರಣಕ್ಕಾಗಿ ಸಂವಿಧಾನವೇ ತನ್ನ ಚುನಾವಣಾ ಪ್ರಣಾಳಿಕೆ ಹೊಂದಿರುವ ಬಹುಜನ ಸಮಾಜ ಪಕ್ಷವನ್ನು ಜನರು ಬೆಂಬಲಿಸಿ ಅಧಿಕಾರಕ್ಕೆ ತರಬೇಕು ಎಂದು ಕೋರಿದರು.
ನಂತರ ಜೈ ಭೀಮ್ ಜನ ಜಾಗೃತಿ ಜಾಥಾ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ಬಿಎಸ್‍ಪಿ ಹಿರಿಯ ಮುಖಂಡರಾದ ಮಾಜಿ ಮೇಯರ್ ಪುರುಷೋತ್ತಮ್, ಗಂಗಾಧರ ಬಹುಜನ, ಜಾಕೀರ್ ಹುಸೇನ್, ಜಾಕೀರ್ ಅಲಿ ಖಾನ್, ಗೋಪಿನಾಥ್, ಚಂದ್ರಶೇಖರ್, ಪುಟ್ಟಸ್ವಾಮಿ ಮುಂತಾದವರು ಇದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು