ಮೈಸೂರು ಮೇಲ್.ಕಾಂ ವರದಿ ಫಲಶ್ರುತಿ : ವೆಂಕಟಶೆಟ್ಟಿ ದೊಡ್ಡಿ ಗ್ರಾಮದ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿದ ಜಿಲ್ಲಾಡಳಿತ
ನವೆಂಬರ್ 21, 2022
-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ವೆಂಕಟಶೆಟ್ಟಿ ದೊಡ್ಡಿ ಗ್ರಾಮದಲ್ಲಿ ಸ್ಮಶಾನವಿಲ್ಲದ ಕಾರಣ ಜಮೀನು ಇಲ್ಲದ ವ್ಯಕ್ತಿಗಳು ಮೃತಪಟ್ಟರೆ ಅಂತ್ಯಕ್ರಿಯೆ ನಡೆಸಲು ಅನಾನುಕೂಲವಾಗಿದ್ದು, ಬೇರೆಯವರ ಜಮೀನು ಆಶ್ರಯಿಸಬೇಕಿದ್ದ ವಿಷಯಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಕೊನೆಗೂ ಸ್ಮಶಾನಕ್ಕೆ ಜಮೀನು ಮಂಜೂರು ಮಾಡಿದೆ. ಹನೂರು ತಾಲೂಕಿನ ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೆಂಕಟ ಶೆಟ್ಟಿ ದೊಡ್ಡಿ ಗ್ರಾಮಕ್ಕೆ ಹುತ್ತೂರು ಸರ್ವೆ ನಂಬರ್ 16 ಬಿ/3 ರಲ್ಲಿ 50 ಸೆಂಟ್ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆ ನಿಗದಿ ಮಾಡಿ ಚಾಮರಾಜನಗರ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವೆಂಕಟಶೆಟ್ಟಿ ದೊಡ್ಡಿ ಗ್ರಾಮದ ಪುಟ್ಟರಾಜ ಶೆಟ್ಟಿ ಎಂಬುವರು ಮೃತಪಟ್ಟಿದ್ದರು. ಇವರಿಗೆ ಜಮೀನು ಇರಲಿಲ್ಲ. ಜತೆಗೆ ಗ್ರಾಮದಲ್ಲಿ ಸಾರ್ವಜನಿಕ ಸ್ಮಶಾನ ಇಲ್ಲದ ಕಾರಣ ಅಂತ್ಯಕ್ರಿಯೆ ನಡೆಸಲು ಪರದಾಡುತ್ತಿದ್ದ ವೇಳೆ, ಹರೀಶ್ ಎಂಬವರು ತಮ್ಮ ಜಮೀನಿನಲ್ಲಿ ಬೆಳೆದು ನಿಂತಿದ್ದ ಜೋಳದ ಫಸಲನ್ನು ಕಟಾವು ಮಾಡಿ ಅಂತ್ಯಕ್ರಿಯೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ಈ ಬಗ್ಗೆ ಮೈಸೂರು ಮೇಲ್.ಕಾಂ ವಿಸ್ತøತ ವರದಿ ಪ್ರಕಟಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ನಂತರ ಸ್ಥಳಕ್ಕೆ ತಹಶಿಲ್ದಾರರು ಭೇಟಿ ನೀಡಿ ಪರಿಶೀಲಿಸಿ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿದ್ದರು. ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಸರ್ಕಾರಿ ಜಮೀನು ಹುಡುಕಾಟಕ್ಕೆ ಆದೇಶಿಸಿ ಅಂತಿಮವಾಗಿ ಹುತ್ತೂರು ಸರ್ವೆ ನಂಬರ್ 16 ಬಿ/3 ರಲ್ಲಿ 50 ಸೆಂಟ್ ಜಮೀನನ್ನು ಸಾರ್ವಜನಿಕ ಸ್ಮಶಾನಕ್ಕೆ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.
0 ಕಾಮೆಂಟ್‌ಗಳು