ಅಡ್ಡಂಡ ಕಾರ್ಯಪ್ಪ ಬರೆದ `ಟಿಪ್ಪು ನಿಜ ಕನಸುಗಳು’ ಕೃತಿ ಮಾರಾಟಕ್ಕೆ ಕೋರ್ಟ್ ನಿರ್ಬಂಧ

ಮೈಸೂರು : ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಬರೆದಿರುವ ಕೃತಿ `ಟಿಪ್ಪು ನಿಜ ಕನಸುಗಳು’ ಮಾರಾಟಕ್ಕೆ ಕೋರ್ಟ್ ತಾತ್ಕಾಲಿಕ ನಿರ್ಬಂಧ ವಿಧಿಸಿ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಿ.ಎಸ್.ರಫಿವುಲ್ಲಾ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರು ನಗರದ 14ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯವು, ಪುಸ್ತಕದಲ್ಲಿ ಸಂಪೂರ್ಣ ತಪ್ಪು ಮಾಹಿತಿ ನೀಡಲಾಗಿದೆ. ಲೇಖಕರು ದಾಖಲಿಸಿರುವ ಅಂಶಗಳಿಗೆ ಯಾವುದೇ ಪುರಾವೆಗಳಿಲ್ಲ. ತಾನು ಬರೆದಿರುವ ಅಂಶಗಳನ್ನು ಎಲ್ಲಿಂದ ಪಡೆದುಕೊಳ್ಳಲಾಗಿದೆ ಎಂಬುದಕ್ಕೆ ದಾಖಲೆಗಳನ್ನು ಒದಗಿಸಿಲ್ಲ. ಅಝಾನ್ ಅನ್ನು ಅವಹೇಳನಕಾರಿಯಾಗಿ ಚಿತ್ರಿಸಲಾಗಿದ್ದು, ತುರುಕರು ಎಂಬ ಪದವನ್ನು ಬಳಕೆ ಮಾಡಿದ್ದಾರೆ. ಈ ಪುಸ್ತಕ ಜನರಿಗೆ ತಲುಪಿದಲ್ಲಿ ಸಮಾಜದಲ್ಲಿ ಅಶಾಂತಿ ಉಂಟಾಗಲು ಕಾರಣವಾಗಲಿದೆ. ಈ ನಿಟ್ಟಿನಲ್ಲಿ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರ ಪರ ವಕೀಲರು ಕೋರಿದ್ದರು.

ಅಲ್ಲದೇ, ಈ ಕೃತಿಯು ಆಧಾರ ರಹಿತವಾಗಿ, ಧರ್ಮ, ಧರ್ಮಗಳ ನಡುವೆ ಕಲಹ ಉಂಟು ಮಾಡುವಂತೆ ರಚನೆಯಾಗಿದ್ದು, ಕೃತಿಯ ಮುಖಪುಟದಲ್ಲಿ ಟಿಪ್ಪುವಿನ ಭಾವಚಿತ್ರವನ್ನು ವಿಕಾರಗೊಳಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು.
ಅರ್ಜಿದಾರರ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಪುಸ್ತಕ ಮಾರಾಟಕ್ಕೆ ನಿಬರ್ಂಧ ವಿಧಿಸಿ ಪ್ರತಿವಾದಿಗಳಾದ ಲೇಖಕರು, ಪ್ರಕಾಶಕರಿಗೆ ತುರ್ತು ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.
ಅಯೋಧ್ಯಾ ಪ್ರಕಾಶನ ಪ್ರಕಟಿಸಿ, ರಾಷ್ಟ್ರೋತ್ಥಾನ ಪರಿಷತ್ ಮುದ್ರಿಸಿರುವ ಈ ಕೃತಿಯನ್ನು ಮುಂದಿನ ವಿಚಾರಣೆಯವರೆಗೂ ಅಂಗಡಿಗಳಲ್ಲಿ ಅಥವಾ ಸಾಮಾಜಿಕ ಜಾಲತಾಣಗಳಲ್ಲಿಯೂ ಮಾರಾಟ ಮಾಡದಂತೆ ಪ್ರಕಾಶಕರಿಗೆ ಕೋರ್ಟ್ ಸೂಚನೆ ನೀಡಿದೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು