ಪೊಲೀಸ್ ಜೀಪ್‍ನಿಂದ ಹಾರಿ ಆರೋಪಿ ಸಾವು : ಪೊಲೀಸರೇ ಹೊಡೆದು ಸಾಯಿಸಿದ್ದಾರೆಂದು ಆರೋಪಿಸಿ ಠಾಣೆ ಮುಂದೆ ಮೃತನ ಕುಟುಂಬದವರ ಪ್ರತಿಭಟನೆ

ಯಳಂದೂರು : ಪೊಲೀಸ್ ವಶದಲ್ಲಿದ್ದ ವ್ಯಕ್ತಿಯೊಬ್ಬನನ್ನು ಜೀಪಿನಲ್ಲಿ ಕರೆದೊಯ್ಯುತ್ತಿದ್ದಾಗ ಆತ ಜೀಪಿನಿಂದ ಹಾರಿ ಸಾವನಪ್ಪಿರುವ ಘಟನೆ ಮಂಗಳವಾರ ಮಧ್ಯಾಹ್ನ ಜರುಗಿದ್ದು ಇದು ಸಾವಲ್ಲ ಕೊಲೆ, ಪೊಲೀಸರೇ ಹೊಡೆದು ಸಾಯಿಸಿದ್ದಾರೆ ಎಂದು ಮೃತನ ಪೋಷಕರು ದೂರಿ ಪ್ರತಿಭಟಿಸಿದ ಘಟನೆ ಜರುಗಿದೆ. 

ಕುಂತೂರು ಮೋಳೆ ಗ್ರಾಮದ ನಿಂಗರಾಜು(24) ಎಂಬ ವ್ಯಕ್ತಿಯೇ ಮೃತಪಟ್ಟ ದುರ್ದೈವಿಯಾಗಿದ್ದಾನೆ.
ಹಿನ್ನೆಲೆ: ಸಮೀಪದ ಕುಂತೂರು ಮೋಳೆ ಗ್ರಾಮದ ಉಪ್ಪಾರ ಬಡಾವಣೆಯ ನಂಜುಂಡಶೆಟ್ಟಿ ಎಂಬುವವರ ಮಗ ನಿಂಗರಾಜು ಇದೇ ಗ್ರಾಮದ ಇದೇ ಸಮುದಾಯದ ಹುಡುಗಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ನ.23 ರಿಂದ ಇವರು ಗ್ರಾಮದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ತಾಲೂಕಿನ ಮಾಂಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.  ನಿಂಗರಾಜು ಎಂಬುವವನೇ ನನ್ನ ಮಗಳನ್ನು ಕರೆದೊಯ್ದಿದ್ದಾನೆ ಎಂಬ ಅನುಮಾನವಿದೆ ಎಂದು ಯುವತಿಯ ತಂದೆ ಮಾದೇಶ್ ಪೊಲೀಸರಿಗೆ ದೂರು ನೀಡಿದ್ದರು.

ಈ ಬಗ್ಗೆ ತನಿಖೆ ಆರಂಭಿಸಿದ ಪೊಲೀಸರು ನಿಂಗರಾಜು ಅವನನ್ನು ನ.29 ರಂದು ಪತ್ತೆ ಹಚ್ಚಿದ್ದಾರೆ. ನಂತರ ಇವರ ಜೀಪ್‍ನಲ್ಲಿ ಯಳಂದೂರು ಪೊಲೀಸ್ ಠಾಣೆಗೆ ಕರೆತಂದಿದ್ದಾರೆ. ಇಲ್ಲಿ ವಿಚಾರಣೆ ನಡೆಸಿ ಮಾಂಬಳ್ಳಿ ಪೊಲೀಸ್ ಠಾಣೆಗೆ ಪೊಲೀಸ್ ಜೀಪ್‍ನಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈತ ಯರಿಯೂರು ಗ್ರಾಮದ ಬಳಿ ಜೀಪ್‍ನಿಂದ ನೆಗೆದಿದ್ದು, ಈತನ ತಲೆ ಮತ್ತು ದೇಹದ ಇತರ ಭಾಗಗಳಿಗೆ ತೀವ್ರ ಪೆಟ್ಟಾಗಿದ್ದು, ಕೂಡಲೇ ಪೊಲೀಸರು ಅದೇ ಜೀಪಿನಲ್ಲಿ ಯಳಂದೂರಿನ ಸಾರ್ವಜನಿಕ ಆಸ್ಪತ್ರೆಗೆ ಕರೆತಂದರಾದರೂ ಈತ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. 
ಪೊಲೀಸ್ ಠಾಣೆಗೆ ಮುತ್ತಿಗೆ : ನಿಂಗರಾಜು ಜೀಪ್‍ನಿಂದ ಹಾರಿ ಮೃತಪಟ್ಟಿಲ್ಲ. ಈತನಿಗೆ ಯಳಂದೂರು ಪೊಲೀಸ್ ಠಾಣೆಯಲ್ಲಿ ವಿಚಾರಣೆಗೆ ಕರೆತಂದು ಹಿಗ್ಗಾಮಗ್ಗ ಥಳಿಸಲಾಗಿದೆ. ಚಿತ್ರಹಿಂಸೆ ನೀಡಿದ್ದ ಕಾರಣ ಈತ ಅಲ್ಲೇ ಮೃತಪಟ್ಟಿದ್ದು, ನಂತರ ಮಾಂಬಳ್ಳಿ ಪೊಲೀಸ್ ಠಾಣೆಗೆ ಈತನನ್ನು ಜೀಪ್‍ನಲ್ಲಿ ಕುಳ್ಳಿರಿಸಿ ಇವರೇ ಬೇಕೆಂತಲೇ ಜೀಪ್‍ನಿಂದ ತಳ್ಳಿದ್ದಾರೆ ಎಂದು ಗ್ರಾಮಸ್ಥರು ಹಾಗೂ ಉಪ್ಪಾರ ಮುಖಂಡರು ಆರೋಪಿಸಿ ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದರು.  ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಿ ಮೃತನ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ. ಶಿವಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಈ ಬಗ್ಗೆ ತನಿಖೆ ನಡೆಸಿ, ಪೊಲೀಸರಿಂದ ತಪ್ಪಾಗಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ವಹಿಸುವ ಭರವಸೆ ನೀಡಿದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು