ಸಮರ್ಥನಂ ಬುದ್ಧಿಮಾಂಧ್ಯ ವಿಶೇಷ ಮಕ್ಕಳ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಮೈಸೂರು : ವಿಜಯನಗರ 4ನೇ ಹಂತದಲ್ಲಿರುವ ಸಮರ್ಥನಂ ಬುದ್ದಿ ವಿಕಲಚೇತನ (ಬುದ್ಧಿಮಾಂಧ್ಯ) ವಿಶೇಷ ಮಕ್ಕಳ ಶಾಲೆಯಲ್ಲಿ 67ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು.
ಮೊದಲಿಗೆ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು, ನಂತರ ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮರಾಂಭ ಮಾತನಾಡಿ, ಪ್ರತಿ ಕನ್ನಡಿಗರ-ಕರುನಾಡಿನ ಹೆಮ್ಮೆಯ ದಿನ ಕನ್ನಡ ರಾಜ್ಯೋತ್ಸವವಾಗಿದ್ದು, ಮೈಸೂರು ಪ್ರಾಂತ್ಯ ಎಂಬ ಹೆಸರಿನ ಮೂಲಕ ಕರೆಯಲ್ಪಡುತ್ತಿದ್ದ ಹಾಗೂ ವಿಭಾಗಗಳಾಗಿ ಚದುರಿ ಹೋಗಿದ್ದ ನಾಡನ್ನು 1973 ರ ನವೆಂಬರ್ 1 ರಂದು "ಕರ್ನಾಟಕ'' ಎಂದು ಮರು ನಾಮಕರಣ ಮಾಡಲಾಯಿತು. ಅಂದಿನಿಂದ ಪ್ರತಿ ವರ್ಷ ನವೆಂಬರ್ 1 ರಂದು ನಾಡಿನಾದ್ಯಂತ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಗುತ್ತಿದೆ. ಅಲ್ಲದೆ ಕನ್ನಡದ ಇತಿಹಾಸ, ಮಹತ್ವ, ಹೋರಾಟಗಳ ಬಗ್ಗೆ ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಹಾಗೂ ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ಮಹನೀಯರನ್ನು ಸ್ಮರಿಸುವ ಉದ್ದೇಶದಿಂದ ಕನ್ನಡ ರಾಜ್ಯೋತ್ಸವ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ
ಅಲ್ಲದೇ ನಾಡಿಗಾಗಿ, ಕನ್ನಡಕ್ಕಾಗಿ ದುಡಿದ ಮಹನೀಯರಿಗೆ ಈ ಮಾಸದಲ್ಲಿ ರಾಜ್ಯ ಸರ್ಕಾರ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಗೌರವಿಸುವ ಮೂಲಕ, ನಾಡಿನ ಸೇವೆಯನ್ನು ಮುಂದುವರೆಸಲು ಇನ್ನಷ್ಟು ಪ್ರೇರಣೆ ನೀಡಿದಂತಾಗುತ್ತದೆ. ಕನ್ನಡ ನಾಡಿನ ಮಹತ್ವವನ್ನು ಕನ್ನಡಿಗರು ಅರಿತಾಗ ಮಾತ್ರ ಕನ್ನಡ ರಾಜ್ಯೋತ್ಸವದ ಆಚರಣೆ ಸಾರ್ಥಕ ವಾಗುತ್ತದೆ ಎಂದು ತಿಳಿಸಿದರು.
ವಿಶೇಷ ಶಿಕ್ಷಕಿ ಪಿ.ಪದ್ಮ ಮಾತನಾಡಿ, ಕನ್ನಡ ನಾಡು ಏಕೀಕರಣವಾಗಲು ನಾಡಿನ ಹಲವು ಕವಿಗಳು, ಸಾಹಿತಿಗಳು, ನಟರು, ವಿಚಾರವಂತರು ಸೇರಿದಂತೆ ಹಲವು ಮಹನೀಯರ ಕೊಡುಗೆ ಅಪಾರ. ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾಯ, ಅನಕೃ, ಕೆ.ಶಿವರಾಮ ಕಾರಂತ, ಕುವೆಂಪು, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಎ.ಎನ್.ಕೃಷ್ಣರಾವ್, ಬಿ. ಎಂ. ಶ್ರೀಕಂಠಯ್ಯ, ನಾಡಿಗೇರ್, ಹುಯಿಲಗೋಳ ನಾರಾಯಣ ರಾವ್, ಆಚಾರ್ಯ, ಜಿ.ಬಿ. ಜೋಷಿ, ಕೆ.ವಿ. ಅಯ್ಯರ್, ವಿ.ಬಿ. ನಾಯಕ್, ಕರ್ಣ, ಗಂಗಾಧರ ದೇಶಪಾಂಡೆ, ಡೆಪ್ಯುಟಿ ಚೆನ್ನಪಬಸಪ್ಪ, ಮಂಗಳವೇಡೆ ಶ್ರೀನಿವಾಸರಾಯರು, ಕೆಂಗಲ್ ಹನುಂತಯ್ಯ, ಎಚ್. ಎಸ್. ದೊರೆಸ್ವಾಮಿ, ಕೋ.ಚನ್ನಬಸಪ್ಪ, ಅಲ್ಲಂ ಸುಮಂಗಳಮ್ಮ, ಗೋರೂರು ರಾಮಸ್ವಾಮಿ ಅಯ್ಯಂಗಾರ್, ಪಾಟೀಲ್ ಪುಟ್ಟಪ್ಪ, ಹಾರನಹಳ್ಳಿ ರಾಮಸ್ವಾಮಿ ಸೇರಿದಂತೆ ನೂರಾರು ಮಹನೀಯರು, ಲಕ್ಷಾಂತರ ಪ್ರಜೆಗಳ ಹೋರಾಟದ ಫಲವಾಗಿ ನಾವಿಂದು ಏಕೀಕೃತ ನಾಡನ್ನು ಕಟ್ಟಿಕೊಂಡಿದ್ದೇವೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲೆಯ ವಿಶೇಷ ಮಕ್ಕಳು ನಾಡ ಗೀತೆ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಗೀತೆಗಳ ಹಾಡಿನ ಜೊತೆಗೆ ಸಾಂಸ್ಕøತಿಕ ಕಾರ್ಯಕ್ರಮ ನಡೆಸಿಕೊಟ್ಟರು, ಸದರಿ ಕಾರ್ಯಕ್ರಮದಲ್ಲಿ  ವಿಶೇಷ ಶಿಕ್ಷಕಿಯಾರಾದ ಹೆಚ್.ವಿದ್ಯಾವತಿ, ಮಾನಸ, ಸಿಬ್ಬಂದಿಗಳಾದ ಪವಿತ್ರ. ರಾಘವೇಂದ್ರ ಸೇರಿದಂತೆ ಮತ್ತಿತತರು ಭಾಗವಗಹಿಸಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು