ಮೈಸೂರಿನ ರಾಜಕಾರಣಿಗಳ ಬಳಿ ನನ್ನನ್ನು ಸುಡುವಷ್ಟು ದುಡ್ಡಿದೆ : ಪ್ರತಾಪ್ ಸಿಂಹ

ಬಸ್ ನಿಲ್ದಾಣ ಒಡೆಯುವ ಗಡುವು ಮುಂದೂಡಿದ ಪ್ರತಾಪ್ ಸಿಂಹ : 
ದಿನಕ್ಕೊಂದು ಬಣ್ಣ ಬದಲಿಸುತ್ತಿರುವ ಗೋಪುರಗಳು 

ಮೈಸೂರು : ನಗರದ ನಂಜನಗೂಡು ರಸ್ತೆಯ ಜೆಎಸ್‍ಎಸ್ ಕಾಲೇಜಿನ ಎದುರು ನಿರ್ಮಿಸಿರುವ ಬಸ್ ನಿಲ್ದಾಣದ ಗೋಪುರಗಳನ್ನು ನಾಲ್ಕು ದಿನದೊಳಗೆ ತೆರವು ಮಾಡದಿದ್ದರೆ, ಖುದ್ದು ನಾನೇ ನಿಂತು ಒಡೆಸುತ್ತೇನೆ ಎಂದು ಹೇಳಿಕೆ ನೀಡಿದ್ದ ಸಂಸದ ಪ್ರತಾಪ್ ಸಿಂಹರ ಗಡುವು ಇಂದಿಗೆ ಮುಗಿದಿದ್ದು, ಗುರುವಾರ ಬೆಳಿಗ್ಗೆ  ದಿಢೀರ್ ಸುದ್ದಿಗೋಷ್ಠಿ ನಡೆಸಿ ನ.22 ರ ತನಕ ಗಡುವು ಮುಂದೂಡಿರುವುದಾಗಿ ಹೇಳಿದರು.
ನ್ಯಾಷನಲ್ ಹೈವೆ ಅಥಾರಿಟಿ ಮೈಸೂರು ಮಹಾನಗರ ಪಾಲಿಕೆ ಮತ್ತು ಕೆಆರ್‍ಐಡಿಎಲ್ ಗೆ ನೋಟೀಸ್ ನೀಡಿ, ಉತ್ತರಿಸಲು ವಾರದ ಗಡುವುದು ನೀಡಿದೆ. ಅವರೇ ಇದೊಂದು ಅಕ್ರಮ ಕಟ್ಟಡ ಎಂದು ಹೇಳಿದ್ದು, ತೆರವು ಮಾಡಿಸಿಯೇ ಮಾಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಕೆಆರ್‍ಐಡಿಎಲ್ ಮಂಜೂರು ಮಾಡಿದ ನಕ್ಷೆ ಪ್ರದರ್ಶಿಸಿದ ಪ್ರತಾಪ್ ಸಿಂಹ ಇಲ್ಲಿ ಗುಂಬಜ್ ಇದೆಯಾ? ನೋಡಿ  ಎಂದು ಪತ್ರಕರ್ತರನ್ನು ಪ್ರಶ್ನಿಸಿದರು.  

ಈ ಮಧ್ಯೆ ಬಸ್ ನಿಲ್ದಾಣದ ಗೋಪುರಗಳು ದಿನಕ್ಕೊಂದು ಬಣ್ಣ ಬದಲಿಸುತ್ತಿದ್ದು, ನಿನ್ನೆಯ ತನಕ ಚಿನ್ನದ ಬಣ್ಣದಲ್ಲಿದ್ದ ಗೋಪುರಕ್ಕೆ ರಾತ್ರೋ ರಾತ್ರಿ ಕೆಂಪು ಬಣ್ಣ ಬಳಿಯಲಾಗಿತ್ತು, ಇದಕ್ಕೂ ಮುನ್ನ ಬಸ್ ನಿಲ್ದಾಣದ ಗೋಡೆಗಳಿಗೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸುತ್ತೂರು ಶ್ರೀಗಳ ಭಾವಚಿತ್ರ ಹಾಕಲಾಗಿತ್ತು. ಗೋಪುರಗಳ ಮೇಲೆ ಕಳಸವನ್ನೂ ಇಡಲಾಗಿತ್ತು. ಇದನ್ನೂ ಛೇಡಿಸಿದ ಪ್ರತಾಪ್ ಸಿಂಹ, ಕಳ್ಳರ ಹಾಗೆ ರಾತ್ರಿ ವೇಳೆ ಯಾಕೆ ಬಣ್ಣ ಹೊಡೆಸುತ್ತೀರಿ ಎಂದು ಪರೋಕ್ಷವಾಗಿ ರಾಮದಾಸ್ ವಿರುದ್ಧ ವ್ಯಂಗ್ಯವಾಡಿದರು.

ಪ್ರತಾಪ್ ಸಿಂಹ ಅವರಿಂದ ತಮಗೆ ತೀವ್ರ ಕಿರುಕುಳ ವಾಗುತ್ತಿದೆ ಎಂಬ ರಾಮದಾಸ್ ಹೇಳಿಕೆಗೆ ಪ್ರತಿಕ್ರಿಯಿಸಿದ ಪ್ರತಾಪ ಸಿಂಹ `ಟಿಪ್ಪು ಅನುಯಾಯಿಗಳಿಗೆ ಕಿರುಕುಳ ಆಗಬೇಕೆ ಹೊರತು ಶಿವಾಜಿ ಮಹಾರಾಜರ ಅನುಯಾಯಿಗಳಿಗಲ್ಲ. ರಾಮದಾಸ್ 29 ವರ್ಷಗಳ ಹಿಂದೆಯೇ ಶಾಸಕರಾದವರು. ಮೂಲತಃ ಕಾಂಗ್ರೆಸ್ಸಿಗರಾಗಿದ್ದರೂ ಅಯೋಧ್ಯೆಯಲ್ಲಿ ಬಾಬರಿ ಮಸೀದಿ ಒಡೆದ ನಂತರ ಬಿಜೆಪಿ ಸೇರಿದವರು. ಮೋದಿಜೀ ಅವರಿಂದಲೇ ಮೆಚ್ಚುಗೆ ಪಡೆದುಕೊಂಡವರು. ಅವರಿಗೆ ಕಿರುಕುಳ ಕೊಡುವಷ್ಟು ನಾನು ದೊಡ್ಡವನಲ್ಲ, ಮೈಸೂರಿನ ರಾಜಕಾರಣಿಗಳು ನನ್ನನ್ನು ಅವರು ಸಂಪಾದನೆ ಮಾಡಿರುವ ದುಡ್ಡಿನಲ್ಲೇ ಸುಟ್ಟುಹಾಕುವಷ್ಟು ಶಕ್ತಿವಂತರಿದ್ದಾರೆ ಎಂದು ಮತ್ತೊಮ್ಮೆ ರಾಮದಾಸ್ ಅವರನ್ನು ಪರೋಕ್ಷವಾಗಿ ಕುಟುಕಿದರು. 
ನಗರದಾದ್ಯಂತ ಇದೇ ವಿನ್ಯಾಸದಲ್ಲಿ ಇನ್ನೂ ಬಹಳಷ್ಟು ಬಸ್ ನಿಲ್ದಾಣಗಳಿವೆ ಎಲ್ಲವನ್ನೂ ಒಡೆಸಿಹಾಕುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಪ್ರತಾಪ್ ಸಿಂಹ ಮೂಲ ವಿನ್ಯಾಸಕ್ಕನುಗುಣವಾಗಿ ಕಟ್ಟಲಿ
ನನ್ನದೇನು ತಕರಾರಿಲ್ಲ. ಇಲ್ಲಿನ ಎಲ್ಲಾ ಅಭಿವೃದ್ಧಿ ದ್ಯೋತಕಗಳು ಮಹಾರಾಜರನ್ನು ಪ್ರತಿನಿಧಿಸುವಂತಿರಬೇಕು. ಮೈಸೂರು ಪರಂಪರೆಗೆ ಪೂರಕವಾಗಿರಬೇಕು. ಗುಂಬಸ್ ಗೂ ಇಂಡೋ ಸಾರ್ಸನಿಕ್ ಕಲೆಗೂ ತುಂಬ ವ್ಯಾತ್ಯಾಸವಿದೆ ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಯಾರೇನೇ ಅಂದರೂ ಹಿಂದೇ ಸರಿಯುವ ಮಾತೇ ಇಲ್ಲ. ನಾಲ್ಕು ವರ್ಷ ಸತತ ಪ್ರಯತ್ನ ಪಟ್ಟು ರೈಲಿಗೆ ಟಿಪ್ಪು ಹೆಸರು ತೆಗೆಸಿದ್ದೇನೆ. ಮಹಿಷಾ ದಸರಾ ನಿಲ್ಲಿಸಿದ್ದೇನೆ. ಈ ವಿಚಾರದಲ್ಲೂ ನನ್ನ ನಿಲುವು ಬದಲಾಗುವುದಿಲ್ಲ. ಸದ್ಯಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಕೆಆರ್‍ಡಿಎಲ್ ನಿರ್ಣಯಕ್ಕೆ ನಾನು ಬದ್ದನಿರುತ್ತೇನೆ. ಅವರು ಕೊಟ್ಟ ಮಾದರಿಯಂತೆ ಕಟ್ಟಡ ನಿರ್ಮಾಣ ಮಾಡಲು ನನ್ನ ಅಭ್ಯಂತರವಿಲ್ಲ. ವಾರದ ಗಡುವಿಗೆ ನಾನೂ ಕಾಯುತ್ತೇನೆ. ಇದು ಸಾರ್ವಜನಿಕರ ಹಣದಲ್ಲಿ ಕಟ್ಟಿರುವ ಕಟ್ಟಡ. ಯಾವ ಶಾಸಕನೂ, ಸಂಸದನೂ ಒಂದು ರೂಪಾಯಿ ಹಾಕಿ ಮಾಡಿಸಿಲ್ಲ ಎಂದರು.



 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು