ಹಿಂದೂ ಮಹಿಳೆಯ ಅಂತ್ಯ ಸಂಸ್ಕಾರ ನೆರವೇರಿಸಿ ಸೌಹಾರ್ಧತೆ ಮೆರೆದ ಮುಸ್ಲಿಮ್ ಯುವಕರು
ನವೆಂಬರ್ 14, 2022
ಮೈಸೂರು : ಹಿಂದೂ ಮಹಿಳೆಯೊಬ್ಬರು ಸಾವಿಗೀಡಾದ ಹಿನ್ನಲೆಯಲ್ಲಿ ಮೈಸೂರಿನ ಮಂಡಿ ಮೊಹಲ್ಲಾದಲ್ಲಿ ಮುಸ್ಲಿಮ್ ಯುವಕರು ಮಹಿಳೆಯ ಶವಯಾತ್ರೆ ನಡೆಸಿ ಅಂತ್ಯ ಸಂಸ್ಕಾರ ನೆರವೇರಿಸಿ ಸೌಹಾರ್ಧತೆ ಮೆರೆದಿದ್ದಾರೆ. ಮಂಡಿ ಮೊಹಲ್ಲಾದ ಸುನ್ನಿ ಚೌಕ್‍ನಲ್ಲಿ ಶಿವಮ್ಮ 30 ವರ್ಷಗಳಿಂದ ಮನೆಗೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಕೆಲ ದಿನಗಳ ಹಿಂದೆ ಶಿವಮ್ಮ ಅನಾರೋಗ್ಯಕ್ಕೆ ತುತ್ತಾಗಿ, ಶುಕ್ರವಾರ ರಾತ್ರಿ ಮೃತಪಟ್ಟರು. ಈ ವಿಷಯ ತಿಳಿದ ಇಸ್ಲಾಮಿಯಾ ಯುವಕರ ಸಮಿತಿ ಸದಸ್ಯರು ಗಾಂಧಿನಗರ, ಕೈಲಾಸಪುರದ ಸುತ್ತಲೂ ಯಾರಾದರೂ ಸಂಬಂಧಿಕರು ಇದ್ದಾರೆಯೇ ಎಂದು ಹುಡುಕಾಡಿದರು. ಆಗ, ಇಬ್ಬರು ಮಕ್ಕಳು, ಗಾಂಧಿನಗರದಲ್ಲಿರುವುದು ತಿಳಿದು ಮೃತದೇಹವನ್ನು ಕೊಂಡೊಯ್ಯುವಂತೆ ಮನವಿ ಮಾಡಿದರು. ಅದಕ್ಕೆ ಅವರು ಒಪ್ಪದಿದ್ದಾಗ ಮುಸ್ಲಿಂ ಯುವಕರೇ ಅಂತ್ಯಸಂಸ್ಕಾರ ನೆರವೇರಿಸಲು ಮುಂದಾದರು. ಶನಿವಾರ ಬೆಳಿಗ್ಗೆವರೆಗೂ ಕಾದರೂ ಯಾರು ಬಾರದ ಹಿನ್ನೆಲೆಯಲ್ಲಿ ಮುಸ್ಲಿಮ್ ಯುವಕರುಗಳೇ ಮುಂದೆ ನಿಂತು ಹಿಂದೂ ಸಂಪ್ರದಾಯದಂತೆ ಮಹಿಳೆಯ ಶವಯಾತ್ರೆಗೆ ಹೆಗಲು ಕೊಟ್ಟು ಅಂತ್ಯ ಸಂಸ್ಕಾರ ನೆರವೇರಿಸಿದ್ದಾರೆ. ಶಿವಮ್ಮ ಇಲ್ಲಿನ ಮಸ್ಲಿಂ ಮಹಿಳೆಯರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ನಾನು ಸತ್ತರೆ, ಮುಸಲ್ಮಾನರೇ ನನ್ನ ಅಂತ್ಯಸಂಸ್ಕಾರ ನೆರವೇರಿಸಬೇಕು ಎಂದು ಕೇಳಿಕೊಂಡಿದ್ದರು. ಅವರ ಕೊನೆಯಾಸೆಯಂತೆ 60 ಮುಸ್ಲಿಂ ಯುವಕರು ಅಂತ್ಯಸಂಸ್ಕಾರದ ಜವಾಬ್ದಾರಿ ವಹಿಸಿಕೊಂಡರು.
ಜೋಡಿ ತೆಂಗಿನ ಮರದ ಬಳಿಯಿರುವ ಸ್ಮಶಾನಕ್ಕೆ 25 ಸಾವಿರ ಶುಲ್ಕ ಕಟ್ಟಿ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿದರು. ಹಿಂದೂ ಪದ್ಧತಿಯಂತೆ ಪೂಜೆ ನೆರವೇರಿಸಲಾಯಿತು. ಇದಾದ ಬಳಿಕ ಮುಸ್ಲಿಂ ಹೆಣ್ಣುಮಕ್ಕಳು ಅಂತಿಮ ದರ್ಶನ ಪಡೆದರು, ನಂತರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಊಟದ ವ್ಯವಸ್ಥೆ ಮಾಡಲಾಗಿತ್ತು. ಎಂದು ಮಾಜಿ ಕಾರ್ಪೋರೇಟರ್ ಸುಹೇಲ್ ಬೇಗ್ ತಿಳಿಸಿದ್ದಾರೆ.
0 ಕಾಮೆಂಟ್‌ಗಳು