ಕಬ್ಬು ಬೆಳೆಗಾರರು, ಜಿಲ್ಲಾಧಿಕಾರಿಗಳ ಸಭೆ ವಿಫಲ : ಮುಂದುವರಿದ ರೈತರ ಅಹೋ ರಾತ್ರಿ ಧರಣಿ
ನವೆಂಬರ್ 08, 2022
ಮೈಸೂರು : ಕಬ್ಬಿಗೆ ಎಫ್‍ಆರ್‍ಪಿ ದರದ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಕಬ್ಬು ಬೆಳೆಗಾರರು ನಡೆಸುತ್ತಿರುವ ಅಹೋರಾತ್ರಿ ಧರಣಿ ಇಂದು ರೈತರು ಮತ್ತು ಜಿಲ್ಲಾಧಿಕಾರಿಗಳ ನಡುವೆ ನಡೆದ ಮಾತುಕತೆ ವಿಫಲವಾಗಿ 9ನೇ ದಿನಕ್ಕೆ ಮುಂದುವರಿಯಿತು. ಜಿಲ್ಲಾ ಮಂತ್ರಿಗಳ ಜೊತೆ ಚರ್ಚಿಸಿ ಸಭೆ ಕರೆಯಲಾಗುವುದು ಅಲ್ಲಿಯ ತನಕ ಚಳುವಳಿ ಕೈಬಿಡುವಂತೆ ಜಿಲ್ಲಾಧಿಕಾರಿಗಳು ಮಾಡಿದ ಮನವಿಗೆ ಕಬ್ಬು ಬೆಳೆಗಾರರು ಒಪ್ಪಲಿಲ್ಲ. ಬಣ್ಣಾರಿ ಕಾರ್ಖಾನೆ ಕಟಾವು ಸಾಗಾಣಿಕೆ ವೆಚ್ಚವನ್ನು ರೈತರಿಂದ ಹೆಚ್ಚುವರಿ ವಸೂಲಿ ಮಾಡಿದರೆ ಕ್ರಿಮಿನಲ್ ಮೊಕದ್ದಮೆ ಹಾ ಕುವುದಾಗಿ ಜಿಲ್ಲಾಧಿಕಾರಿಗಳು ಕಾರ್ಖಾನೆ ಆಡಳಿತಕ್ಕೆ ಎಚ್ಚರಿಕೆ ನೀಡಿದರು. ಕಬ್ಬು ಎಫ್‍ಆರ್‍ಪಿ ದರ ನಿಗದಿಗೆ ನ.10 ರಂದು ಸರ್ಕಾರ ಸಭೆ ಕರೆದಿರುವುದರಿಂದ ತೀರ್ಮಾನ ನೋಡಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಸಭೆಯಲ್ಲಿ ಕಬ್ಬು ಕಟಾವು ಸಾಗಾಣಿಕೆ ವೆಚ್ಚ ಕಳೆದ ವರ್ಷಕ್ಕಿಂತ 150 ರೂ. ಏರಿಕೆ ಆಗಿರುವ ಬಗ್ಗೆ, ಕಾರ್ಖಾನೆಗಳ ನಿರ್ಲಕ್ಷ್ಯದಿಂದ 16 ತಿಂಗಳ ತನಕ ಕಬ್ಬು ಕಟಾವು ಮಾಡಿದರೆ ರೈತರಿಗೆ ನಷ್ಟ ಉಂಟಾಗುತ್ತಿರುವುದು. ಈ ವಿಳಂಬಕ್ಕೆ ಹೆಚ್ಚುವರಿ ಬಡ್ಡಿ ಸೇರಿಸಿಕೊಡಲು ರೈತರು ಒತ್ತಾಯಿಸಿದರು. ಜತೆಗೆ ಸಕ್ಕರೆ ಇಳುವರಿ ಆದರಿಸಿ ಕಬ್ಬು ಬೆಲೆ ನಿಗದಿ ಮಾಡುವ ಮಾನದಂಡ ಜಾರಿಯಾದ ಮೇಲೆ ಸಕ್ಕರೆ ಇಳುವರಿಯಲ್ಲಿ ಮೋಸವಾಗುತ್ತಿದ್ದು ರೈತರಿಗೆ ಅನ್ಯಾಯವಾಗುವುದನ್ನು ತಪ್ಪಿಸಲು ಕ್ರಮ ಕೈಗೊಳ್ಳಬೇಕು. ಹೊಸದಾಗಿ ಕಬ್ಬು ಬೆಳೆಯುವ ರೈತರ ಜತೆ ಬಣ್ಣಾರಿ ಕಾರ್ಖಾನೆ ಒಪ್ಪಂದ ಮಾಡಿಕೊಳ್ಳುತ್ತಿಲ್ಲ. ಈ ಭಾಗದಲ್ಲಿ ಹೊಸ ಕಾರ್ಖಾನೆ ಆರಂಭಕ್ಕೆ ಸರ್ಕಾರಕ್ಕೆ ವರದಿ ನೀಡಬೇಕು. ಬಗರ್ ಹುಕುಂ ಸಾಗುವಳಿ ಮಾಡುತ್ತಿರುವ ರೈತರಿಗೆ ಸಾಗುವಳಿ ಪತ್ರ ಕೊಡಬೇಕು. ಮಳೆ ಹಾನಿಯಿಂದ ಬೆಳೆ ನಷ್ಟವಾಗಿರುವ ರೈತರಿಗೆ ಪರಿಹಾರ ಕೊಡಬೇಕು ಎಂದು ರೈತರು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ಸಭೆಯಲ್ಲಿ ಕಬ್ಬು ಬೆಳೆಗಾರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಪಿ ಸೋಮಶೇಖರ್, ಬರಡನಪುರ ನಾಗರಾಜ್, ಕಿರಗಸೂರು ಶಂಕರ್, ಕುರುಬೂರು ಸಿದ್ದೇಶ್, ಹಾಡ್ಯರವಿ, ಮಂಜು, ಸಿದ್ದರಾಮು, ದೇವಮ್ಮಣ್ಣಿ, ಮಂಜುನಾಥ್, ಪ್ರಸಾದ್ ನಾಯಕ, ಮಹದೇವಸ್ವಾಮಿ ಇನ್ನು ಮುಂತಾದವರು ಇದ್ದರು,
0 ಕಾಮೆಂಟ್‌ಗಳು