ನುಗು ಏತ ನೀರಾವರಿ ಯೋಜನೆ ಶಾಸಕ ಹರ್ಷವರ್ಧನ್ ಅವರ ಚುನಾವಣಾ ಗಿಮಿಕ್ : ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಆರೋಪ
ನವೆಂಬರ್ 27, 2022
ಮೈಸೂರು : ನಂಜನಗೂಡು ಕ್ಷೇತ್ರದ ನುಗು ಏತ ಯೋಜನೆ ಜಾರಿ ಬಗ್ಗೆ ಶಾಸಕ ಹರ್ಷವರ್ಧನ್ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆದು ಚಾಲನೆ ನೀಡುತ್ತಿರುವುದು ಚುನಾವಣಾ ಗಿಮಿಕ್, ಜೊತೆಗೆ ಈ ಕಾರ್ಯಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗಿದೆ ಎಂದು ಮಾಜಿ ಶಾಸಕ ಕಳಲೆ ಕೇಶವಮೂರ್ತಿ ಆರೋಪಿಸಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದಿನ ನಂಜನಗೂಡು ಕ್ಷೇತ್ರದ ಶಾಸಕ ಮಾಜಿ ಸಚಿವ ಎಂ.ಮಹದೇವು ಅವರು 2003 ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ.ಕೃಷÐ ಅವರನ್ನು ಕರೆದುಕೊಂಡು ಬಂದು ನುಗು ಏತ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದರು. ಆದರೆ ಕಾವೇರಿ ಟ್ರಿಬ್ಯುನಲ್ ಆದೇಶ ಬಂದ ಹಿನ್ನೆಲೆಯಲ್ಲಿ ಈ ಯೋಜನೆ ಅರ್ಧಕ್ಕೆ ನಿಂತು ಹೋಯಿತು. ಆದರೆ, ಈಗ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ್ ಚುನಾವಣಾ ಗಿಮಿಕ್ ಗಾಗಿ ನುಗು ಏತ ಯೋಜನೆ ಜಾರಿ ಮಾಡುತ್ತಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ, ಈ ಯೋಜನೆಯ ಉದ್ದೇಶ ಏನು? ಇದರಿಂದ ಎಷ್ಟು ಪ್ರದೇಶಗಳು ನೀರಾವರಿ ಹೊಂದಲಿವೆ? ಎಷ್ಟು ಕೆರೆಗಳು ತುಂಬಲಿವೆ? ಇದರಿಂದ ಇನ್ಯಾವ ಪ್ರಯೋಜನ ಇದೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು. ಚುನಾವಣೆ ಹತ್ತಿರ ಬಂತು ಎಂದು ತರಾ ತುರಿಯಲ್ಲಿ ಕೆಲವು ಯೋಜನೆಗಳನ್ನು ಜಾರಿ ಮಾಡಲು ಹೊರಟಿದ್ದಾರೆ. ನುಗು ಮತ್ತು ಹೆಡಿಯಾಲ ಏತ ಯೋಜನೆಯಿಂದ ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ. ಈ ಹಿಂದೆ 2016 ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು ಹುರಾ ಗ್ರಾಮದಲ್ಲಿ ಕೆರೆ ತುಂಬಿಸುವ ಯೋಜನೆಗೆ ಚಾಲನೆ ನೀಡಿ ಈ ಭಾಗದ 28 ಕೆರೆಗಳಿಗೆ 42 ಕೋಟಿ ರೂ. ಅನುದಾನ ನೀಡಿ ಮಂಜೂರು ಮಾಡಿದ್ದರು. ಈ ಕೆಲಸ ಪ್ರಗತಿಯಲ್ಲಿದ್ದು ಇದನ್ನು ಪೂರ್ಣಗೊಳಿಸದೆ ಶಾಸಕ ಹರ್ಷವರ್ಧನ್ ರಾಜಕೀಯ ಉದ್ದೇಶದಿಂದ ನುಗು ಏತ ಯೋಜನೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ಕಿಡಿಕಾರಿದರು. ವಾಲ್ಮೀಕಿ ಭವನ ಸಿದ್ಧರಾಮಯ್ಯ ಅವರ ಕೊಡುಗೆ: ತಾಲ್ಲೂಕಿನಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಬೇಕು ಎಂದು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ಧರಾಮಯ್ಯ ಅವರು 3.75 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದ್ದರು. ಆದರೆ ಈ ಭವನದ ಕಾಮಾಗಾರಿ ಪೂರ್ಣಗೊಳ್ಳದೆ ಚುನಾವಣಾ ದೃಷ್ಟಿಯಿಂದ ತರಾತುರಿಯಲ್ಲಿ ಉದ್ಘಾಟನೆಗೆ ಶಾಸಕರು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ.ಬಸವರಾಜು, ನಂಜನಗೂಡು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ತಗಡೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಡ್ಯ ರಂಗಸ್ವಾಮಿ, ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ, ನಂಜನಗೂಡು ನಗರ ಕಾಂಗ್ರೆಸ್ ಅಧ್ಯಕ್ಷ ಸಿ.ಎಂ.ಶಂಕರ್, ಕಾಂಗ್ರೆಸ್ ಪರಿಶಿಷ್ಟ ವರ್ಗಗಳ ವಿಭಾಗ ರಾಜ್ಯ ಕಾರ್ಯದರ್ಶಿ ಹೆಡತಲೆ ದೊರೆಸ್ವಾಮಿ ನಾಯಕ ಉಪಸ್ಥಿತರಿದ್ದರು. ಗೌರಿಘಟ್ಟದ ಬೀದಿಯಲ್ಲಿ ಸಮುದಾಯ ಭವನ ಉದ್ಘಾಟನೆಗೆ ಶಾಸಕ ಹರ್ಷವರ್ಧನ್ ಮುಂದಾಗಿದ್ದಾರೆ. ಇದು ಸರ್ಕಾರದ ಆಸ್ತಿಯಲ್ಲ. ಇದು ನಾಯಕ ಸಮುದಾಯದ ಆಸ್ತಿ, ಈ ಸಮುದಾಯ ಭವನ ನಿರ್ಮಾಣಕ್ಕೆ ಎಲ್ಲಾ ಜನಪ್ರತಿನಿಧಿಗಳು, ಸಮುದಾಯದ ಮುಖಂಡರುಗಳು ದೇಣಿಗೆ ನೀಡಿದ್ದಾರೆ. ಆದರೆ ಇದು ನನ್ನ ಕೊಡುಗೆ ಎಂದು ಶಾಸಕ ಹರ್ಷವರ್ಧನ್ ಬಿಂಬಿಸಿಕೊಳ್ಳಲು ಪ್ರಯತ್ನ ಪಡುತ್ತಿದ್ದಾರೆ. ಎಸ್.ಸಿ.ಬಸವರಾಜು, ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ.
0 ಕಾಮೆಂಟ್‌ಗಳು