ಶೀಘ್ರದಲ್ಲೇ ಅಂಬೇಡ್ಕರ್ ಬಡಾವಣೆಯ 108 ಜನರಿಗೆ ಹಕ್ಕುಪತ್ರ ವಿತರಣೆ : ಶಾಸಕ ಎಲ್.ನಾಗೇಂದ್ರ ಭರವಸೆ

ಕುಂಬಾರಕೊಪ್ಪಲು ಅಂಬೇಡ್ಕರ್ ಬಡಾವಣೆಯಲ್ಲಿ ಅದ್ಧೂರಿಯಾಗಿ ಜರುಗಿದ ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ

ಮೈಸೂರು : 35 ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ 108 ಮನೆಗಳಿಗೆ ಹಕ್ಕು ಪತ್ರ ಕೊಡುವ ಕಾರ್ಯಕ್ರಮವನ್ನು ಶೀಘ್ರದಲ್ಲಿ ನಡೆಸಲಾಗುವುದು ಎಂದು ಶಾಸಕ ಎಲ್.ನಾಗೇಂದ್ರ ಹೇಳಿದರು.
ನಗರದ ಕುಂಬಾರಕೊಪ್ಪಲು ಅಂಬೇಡ್ಕರ್ ಬಡಾವಣೆಯಲ್ಲಿ ಸಿವಿಲ್ ಕಂಟ್ರಾಕ್ಟರ್ ಸರ್ವೆಶ್ ನೇತೃತ್ವದಲ್ಲಿ ಶ್ರೀ ಆದಿಶಕ್ತಿ ಕಾಳಿಕಾದೇವಿ ಸೇವಾ ಸಮಿತಿಯವರು ಏರ್ಪಡಿಸಿದ್ದ ವಿಶ್ವರತ್ನ ಡಾ.ಅಂಬೇಡ್ಕರ್ ಪುತ್ಥಳಿ ನಿರ್ಮಾಣದ ಮೊದಲ ವರ್ಷದ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಸಲ್ಲಿಸಿ ಅವರು ಮಾತನಾಡಿದರು.

ವಸತಿ ಯೋಜನೆಯಲ್ಲಿ 18 ಮನೆಗಳು ಮಂಜೂರಾಗಿವೆ. 48 ಸಾವಿರ ರೂ. ಕಟ್ಟಿದರೆ 8 ಲಕ್ಷ ರೂ. ಬೆಲೆ ಬಾಳುವ ಮನೆಯನ್ನು ಸರ್ಕಾರದಿಂದ ನಿರ್ಮಿಸಿಕೊಡಲಾಗುವುದು. ಅಲ್ಲದೇ ಇನ್ನೂ ಇಂತಹ 25 ಮನೆಗಳ ನಿರ್ಮಾಣಕ್ಕೆ ಅವಕಾಶವಿದ್ದು, ಆಸಕ್ತರು ಮುಂದೆ ಬಂದಲ್ಲಿ ಅಂತಹವರಿಗೆ ಮನೆಯನ್ನು ಕಟ್ಟಿಕೊಡಲಾಗುತ್ತದೆ ಎಂದರು.

ಇದುವರೆಗೂ ನಮಗೆ ನಿಮ್ಮ ಮನೆಯ ಬಾಗಿಲನ್ನು ಮುಚ್ಚಿದ್ದೀರಿ. ಈಗ ಬಾಗಿಲು ತೆರೆದು ನಮ್ಮನ್ನು ಆಹ್ವಾನಿಸಿ ಗೌರವಿಸಿದ್ದೀರಿ ನನ್ನನ್ನು ಒಬ್ಬ ಶಾಸಕ ಎಂದು ಭಾವಿಸುವುದಕ್ಕಿಂತ ನಿಮ್ಮ ಕುಟುಂಬದ ಸದಸ್ಯ ಎಂದು ತಿಳಿದುಕೊಳ್ಳಿ. ನಿಮ್ಮ ಯಾವುದೇ ಕಷ್ಟಗಳಿಗೂ ನಾನು ನಿಮ್ಮೊಂದಿಗೆ ಇರುತ್ತೇನೆ ಎಂದರು. ಬಡಾವಣೆಯ ಶಾಲೆಯ ಅಭಿವೃದ್ಧಿಗೆ 25 ಲಕ್ಷ ರೂ. ಅನುದಾನ ಕೊಡಿಸಿದ್ದೇನೆ. ಕೆಲಸ ಪ್ರಾರಂಭವಾಗುತ್ತದೆ. ಬಡಾವಣೆಯಲ್ಲಿ ಹೈಟೆಕ್ ಬಸ್ ನಿಲ್ದಾಣ, ಆಟೋ ನಿಲ್ದಾಣ, ರಸ್ತೆಗಳು ಅಭಿವೃದ್ಧಿಯಾಗಿವೆ. ಉಳಿದ ಎಲ್ಲಾ ಅಭಿವೃದ್ಧಿ ಕೆಲಸಗಳನ್ನೂ ಪ್ರಾಮಾಣಿಕವಾಗಿ ಮಾಡುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಮಂಡ್ಯ ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಆನುವಾಳು ಸುರೇಶ್, ರಘು ಕಿಂಗ್‍ಡಮ್ ಸೇರಿದಂತೆ ವಿವಿಧ ಗಣ್ಯರನ್ನು ಸನ್ಮಾನಿಸಲಾಯಿತು. ಜತೆಗೆ ಸಂಘದ ವತಿಯಿಂದ ಶಾಸಕ ಎಲ್.ನಾಗೇಂದ್ರ ಅವರನ್ನು ಸಂಘದ ಅಧ್ಯಕ್ಷ ಸರ್ವೆಶ್ ಅವರು ಆತ್ಮೀಯವಾಗಿ ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಸಂಗೀತ ರಸ ಮಂಜರಿ ಕಾರ್ಯಕ್ರಮ ನಡೆಯಿತು. 
ಸಂಘದ ಅಧ್ಯಕ್ಷ ಸಿವಿಲ್ ಕಂಟ್ರಾಕ್ಟರ್ ಸರ್ವೇಶ್, ಉಪಾಧ್ಯಕ್ಷ ಪುಟ್ಟರಾಜು, ಕಾರ್ಯದರ್ಶಿ ನಾಗರಾಜು, ಸಹ ಕಾರ್ಯದರ್ಶಿ ರಾಮಕೃಷ್ಣ, ಖಜಾಂಚಿ ಸೋಮೇಶ್, ನಿರ್ದೇಶಕರುಗಳಾದ ದೊರೆಸ್ವಾಮಿ, ಶಿವಕುಮಾರ್, ರವಿಚಂದ್ರ, ಪ್ರಕಾಶ, ಸಿ.ಮಹದೇವ್, ಕಾರ್ತಿಕ್, ಯಶವಂತ್, ರಾಘವೇಂದ್ರ, ಎಸ್.ಶಂಕರ್ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು