ನೈಋತ್ಯ ರೈಲ್ವೆ ಮೈಸೂರು ವಿಭಾಗದಿಂದ ಗಾಂಧಿ ಜಯಂತಿ ಆಚರಣೆ

 ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ಅವರಿಂದ ಮಹಾತ್ಮಾ ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ

ವರದಿ-ನಜೀರ್ ಅಹಮದ್, ಮೈಸೂರು

ಮೈಸೂರು : ನೈಋತ್ಯ ರೈಲ್ವೆಯ ಮೈಸೂರು ವಿಭಾಗದಿಂದ ಗಾಂಧಿ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಯಿತು. ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ರಾಹುಲ್ ಅಗರ್ವಾಲ್ ರವರು ರೈಲ್ವೆ ಕ್ರೀಡಾ ಮೈದಾನದ ಬಳಿಯಿರುವ ಗಾಂಧಿ ವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಹಾತ್ಮ ಗಾಂಧಿಯವರ ೧೫೩ನೇ ಜನ್ಮದಿನದ ಅಂಗವಾಗಿ ಅವರಿಗೆ ಗೌರವ ಸಲ್ಲಿಸಿದರು.


ನಂತರ ನಡೆದ ಕಾರ್ಯಕ್ರಮದಲ್ಲಿ ಅವರು ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಸ್ವಚ್ಛತಾ ಪ್ರತಿಜ್ಞೆ ಬೋಧಿಸಿದರು. ಸ್ವಚ್ಛ ಭಾರತ ಕುರಿತಾದ ಪ್ರಬಂಧ ಸ್ಪರ್ಧೆ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ನೈರ್ಮಲ್ಯ ಮತ್ತು ಸ್ವಚ್ಛತಾ ಸಿಬ್ಬಂದಿಗಳಿಗೆ ಅವರ ಸಮರ್ಪಿತ ಕೆಲಸಕ್ಕಾಗಿ ಗೌರವಿಸಲಾಯಿತು. ಮತ್ತು ಏಕ ಬಳಕೆಯ ಪ್ಲಾಸ್ಟಿಕ್ ನಿಷೇಧದ ಸಂದೇಶವನ್ನು ಸಾರಲು ರೈಲು ಪ್ರಯಾಣಿಕರಿಗೆ ಬಟ್ಟೆಯ ಚೀಲಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರು, ಇತ್ತೀಚಿನ ವರ್ಷಗಳಲ್ಲಿ, ರೈಲ್ವೆ ಸಚಿವಾಲಯವು ಸರ್ಕಾರದ ಸ್ವಚ್ಛತೆಯ ಗುರಿ ತಲುಪಲು ಸ್ವಚ್ಛ ಭಾರತ ಅಭಿಯಾನಕ್ಕೆ ಉತ್ತೇಜನ ನೀಡಲು ೧೫ ದಿನಗಳ ಸ್ವಚ್ಛತಾ ಪಾಕ್ಷಿಕ ಆಚರಣೆ ಒಳಗೊಂಡಂತೆ ಹಲವು ರೀತಿಯಲ್ಲಿ ಪ್ರೋತ್ಸಾಹ ನೀಡುತ್ತಿದೆ. ನೈಋತ್ಯ ರೈಲ್ವೆಯ ಮೈಸೂರು ವಿಭಾಗವು "ಸ್ವಚ್ಛ ರೈಲು, ಸ್ವಚ್ಛ ಭಾರತ" ಅಡಿಯಲ್ಲಿ ಸೆಪ್ಟೆಂಬರ್ ೧೬ ರಿಂದ ಅಕ್ಟೋಬರ್ ೨ ರವರೆಗೆ ವಿಭಾಗದಾದ್ಯಂತ ಹದಿನೈದು ದಿನಗಳ ಕಾಲ ಸ್ವಚ್ಛತಾ ಅಭಿಯಾನವನ್ನು ಆಚರಿಸಿತು. ಸ್ವಚ್ಛತಾ ಪಾಕ್ಷಿಕದ ಪ್ರತಿ ದಿನವೂ ಸ್ವಚ್ಛ ಹಳಿಗಳು, ಸ್ವಚ್ಛ ಜಲಮೂಲಗಳು, ಸ್ವಚ್ಛತೆಯ ಕುರಿತಾದ ಸಮುದಾಯ ತೊಡಗಿಸಿಕೊಳ್ಳುವಿಕೆ, ಸ್ವಚ್ಛ ವಸತಿ ಸಮೂಹ ಮತ್ತು ನಿಲ್ದಾಣಗಳು ಮತ್ತು ಸ್ವಚ್ಛ ರೈಲುಗಳಂತಹ ಒಂದೊಂದು ಸ್ವಚ್ಛತಾ ವಿಷಯದ ಬಗ್ಗೆ ವಿಶೇಷ ಗಮನ ನೀಡಲಾಯಿತು. 

‘ಸ್ವಚ್ಛತೆಯ ಅರಿವು’ ಬಗೆಗಿನ ವಿಷಯದೊಂದಿಗೆ ಪ್ರಾರಂಭವಾದ ಅಭಿಯಾನದಲ್ಲಿ ರೈಲ್ವೆ ಸಿಬ್ಬಂದಿ ಸ್ವಚ್ಛತೆ ರೂಡಿಸಿಕೊಳ್ಳುವ ಮತ್ತು ಸ್ವಚ್ಛತೆಯನ್ನು ಕಾಪಾಡುವ ಪ್ರತಿಜ್ಞೆ ಮಾಡಿದರು. ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸುವ ಈ ಕಾರ್ಯಕ್ರಮದಲ್ಲಿ ಸಿಬ್ಬಂದಿಗಳು, ಸಾರ್ವಜನಿಕರು, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗು ಸರ್ಕಾರೇತರ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ವಿಭಾಗದಾದ್ಯಂತ ನಡೆಸಲಾಯಿತು.
ಹೆಚ್ಚುವರಿ ವಿಭಾಗೀಯ ರೈಲ್ವೆ ವ್ಯವಸ್ಥಾಪಕರುಗಳಾದ ವಿನಾಯಕ್ ಆರ್.ನಾಯಕ್ ಮತ್ತು ಇ.ವಿಜಯ, ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಗಾಂಧಿ ಜಯಂತಿ ಆಚರಣೆಯಲ್ಲಿ ಉಪಸ್ಥಿತರಿದ್ದರು.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು