ಬೇಜವಾಬ್ದಾರಿ ತೋರಿದರೆ ಮತ್ತೇ ಹೋರಾಟ : ಎಚ್ಚರಿಕೆ ನೀಡಿದ ಬಡಗಲಪುರ ನಾಗೇಂದ್ರ
ವರದಿ-ನಜೀರ್ ಅಹಮದ್, ಮೈಸೂರು
ಮೈಸೂರು : ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸಲು ಒತ್ತಾಯಿಸಿ ಈ ಹಿಂದೆ ಸಿಎಂ ಮನೆಗೆ ಮುತ್ತಿಗೆ ಹಾಕಿದಾಗ 15 ದಿನಗಳೊಳಗೆ ಬೇಡಿಕೆ ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ದರು. ಆದರೆ ಎರಡು ತಿಂಗಳಾದರೂ ನಿರ್ಲಕ್ಷಿಸಿರುವ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘದ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲು ರೂಪುರೇμÉ ಸಿದ್ಧಪಡಿಸಲಾಗುತ್ತಿದೆ ಎಂದು ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ತಿಳಿಸಿದರು.
ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರ ವಿಷಯದಲ್ಲಿ ಸರ್ಕಾರ ಬೇಜವಾಬ್ದಾರಿ ತೋರುತ್ತಿದೆ. ಜೊತೆಗೆ ಈಗ ಮತ್ತೆ ಕಾಲಾವಕಾಶ ಕೋರಿದ್ದು, ಬಳಿಕ ನಿರ್ಲಕ್ಷಿಸಿದರೆ ಉಗ್ರ ಹೋರಾಟ ನಡೆಸಲಾಗುವುದೆಂದು ಎಚ್ಚರಿಸಿದರು.
ಅಲ್ಲದೆ, ಭೂತಾನ್‍ನಿಂದ ದೇಶಕ್ಕೆ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಅಡಿಕೆ ಉತ್ಪಾದನೆ ಹೆಚ್ಚಿನ ಪ್ರಮಾಣದಲ್ಲಿದ್ದು, ಇದರಿಂದಾಗಿ ಬೆಲೆ ಕುಸಿಯುತ್ತಿದೆ. ಆದರೂ ಅಡಿಕೆ ಬೆಳೆಯುವ ಪ್ರದೇಶದ ಜನಪ್ರತಿನಿಧಿಗಳಾದ ಶೋಭಾ ಕರಂದ್ಲಾಜೆ, ನಳೀನ್‍ಕುಮಾರ್ ಕಟೀಲ್, ಪ್ರತಾಪ್‍ಸಿಂಹ ಮೊದಲಾದವರು ಏಕೆ ಧ್ವನಿಯೆತ್ತುತ್ತಿಲ್ಲ ಎಂದು ಪ್ರಶ್ನಿಸಿದರು.
ಜೊತಗೆ, ಕಬ್ಬು ಬೆಳೆಗಾರರು, ಅಡಿಕೆ ರೈತರು, ಭೂಮಿ ಕಸಿದುಕೊಳ್ಳುವ ಆತಂಕ ಎದುರಿಸುತ್ತಿರುವ ರೈತರ ಪರವಾಗಿ ದೊಡ್ಡ ಹೋರಾಟವನ್ನು ರಾಜ್ಯ ರೈತ ಸಂಘ ರೂಪಿಸಲಿದೆ. ಈ ವೇಳೆ ಈ ಜನಪ್ರತಿನಿಧಿಗಳು ರಸ್ತೆಯಲ್ಲಿ ಓಡಾಡಲು ಬಿಡದೇ ಪ್ರತಿಭಟಿಸಲಾಗುವುದೆಂದರು.
ಪಿ. ಮರಂಕಯ್ಯ, ಮಂಡಕಳ್ಳಿ ಮಹೇಶ್, ಪ್ರಸನ್ನ ಎನ್.ಗೌಡ, ಹೊಸಕೋಟೆ ಬಸವರಾಜು ಹಾಜರಿದ್ದರು.
0 ಕಾಮೆಂಟ್‌ಗಳು