ಆದಿವಾಸಿ ಕರಿಯಯ್ಯ ಕೊಲೆ ಆರೋಪಿಗಳ ಬಂಧನಕ್ಕೆ ವಿಶ್ವನಾಥ್ ಒತ್ತಾಯ

ತನಿಖಾಧಿಕಾರಿ ಬದಲಾವಣೆಗೆ ವಿರೋಧ

ಮೈಸೂರು : ಇತ್ತೀಚೆಗೆ ಅರಣ್ಯ ಇಲಾಖೆ ಬಂಧನದಲ್ಲಿ ಸಾವಿಗೀಡಾದ ಆದಿವಾಸಿ ಕರಿಯಯ್ಯನನ್ನು ಅರಣ್ಯಾಧಿಕಾರಿಗಳೇ ಹೊಡೆದು ಕೊಲೆ ಮಾಡಿದ್ದಾರೆ ಎಂದು 17 ಜನ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಕೂಡಲೇ ಅವರೆಲ್ಲರನ್ನೂ ಬಂಧಿಸುವಂತೆ ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಒತ್ತಾಯಿಸಿದರು.
 ಮೈಸೂರಿನಲ್ಲಿಂದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಿಯಯ್ಯ ಅರಣ್ಯ ಇಲಾಖೆ ಕಸ್ಟಡಿಯಲ್ಲಿ ಮೃತಪಟ್ಟ ಬಳಿಕ ನ್ಯಾಯಾಧೀಶರ ನೇತೃತ್ವದಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. 17 ಜನರ ವಿರುದ್ಧ ಎಫ್ ಐ ಆರ್ ದಾಖಲಾಗಿದ್ದು, ಇದುವರೆಗೂ ಯಾರೊಬ್ಬರನ್ನೂ ಬಂಧಿಸಿಲ್ಲ. ಈಗ ತನಿಖಾಧಿಕಾರಿಯನ್ನೇ ಬದಲಾಯಿಸಲಾಗಿದೆ. ಕರಿಯಯ್ಯ ಹೃದಯಾಘಾತದಿಂದ ಸತ್ತಿದ್ದಾನೆ ಎಂದು ಬಿಂಬಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದ ಅವರು, ಆದಿವಾಸಿಗಳ ಬದುಕನ್ನು ಕಿತ್ತುಕೊಂಡು ನೀವು ಎಷ್ಟೇ ಮೀಸಲಾತಿ ಕೊಟ್ಟರೂ ಪ್ರಯೋಜನವೇನು? ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಆದಿವಾಸಿ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದರು.
ಕಾಡಿನಲ್ಲಿ ಮಾನವ ಮತ್ತು ಪ್ರಾಣಿ ಸಂಘರ್ಷಗಳ ನಡುವೆ ಬದುಕು ನಡೆಸುತ್ತಿರುವ ಆದಿವಾಸಿಗಳ ಜೀವನ ಮೂರಾಬಟ್ಟೆಯಾಗಿದೆ. ಒಂದೆಡೆ ಪ್ರಾಣಿಗಳ ಭಯ, ಮತ್ತೊಂದೆಡೆ ಅರಣ್ಯಾಧಿಕಾರಿಗಳ ಕಾಟ ಇವರ ನಡುವೆ ಆದಿವಾಸಿಗಳು ಹೇಗೆ ಬದುಕಬೇಕು. ನಾನು ಮಂತ್ರಿಯಾಗಿದ್ದಾಗ ಅರಣ್ಯದಲ್ಲಿಯೇ ಸಂಪುಟ ಸಭೆ ನಡೆಸುವಂತೆ ಕೋರಿದ್ದೆ. ಆಗ ಮುಖ್ಯಮಂತ್ರಿಯಾಗಿದ್ದ ಎಸ್‍ಎಂ.ಕೃಷ್ಣ ಅವರು ಆದಿವಾಸಿಗಳಿಗೆ ಅನೇಕ ಸವಲತ್ತು ನೀಡಿದ್ದರು. ಅನಕ್ಷರಸ್ತ ಆದಿವಾಸಿಗಳಿಗೆ ಬುದ್ದಿ ಹೇಳುವ ಬದಲು ಕೊಂದು ಹಾಕಿರುವುದು ಅಕ್ಷಮ್ಯ ಅಪರಾಧ ಎಲ್ಲರನ್ನೂ ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು