`ಛಲವಾದಿ ನಾರಾಯಣಸ್ವಾಮಿ ಮೂಲಕ ಬಿಜೆಪಿ ದಲಿತರನ್ನು ಮತ್ತೇ ಗುಲಾಮಗಿರಿಗೆ ತಳ್ಳುತ್ತಿದೆ’

ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಆತಂಕ : ಸಿದ್ದರಾಮಯ್ಯ ವಿರುದ್ಧ ಹೇಳಿಕೆ ವಾಪಸ್ ಪಡೆಯಲು ಆಗ್ರಹ

ಮೈಸೂರು : ಮಡಿ ಮೈಲಿಗೆಯ ಆಚರಣೆಯಲ್ಲಿ ದಲಿತರನ್ನು ಶೋಷಣೆ ಮಾಡುತ್ತಿರುವ ಹಿಂದುತ್ವವಾದಿಗಳು ಈಗ ಛಲವಾದಿ ನಾರಾಯಣಸ್ವಾಮಿ ಮೂಲಕ ದಲಿತರಲ್ಲಿ ಒಡಕು ಮೂಡಿಸಿ ಅವರನ್ನು ಮತ್ತೇ ಗುಲಾಮಗಿರಿಯತ್ತ ತಳ್ಳುವ ವ್ಯವಸ್ಥಿತ ಸಂಚು ರೂಪಿಸುತ್ತಿದೆ ಈ ಬಗ್ಗೆ ದಲಿತರು ಎಚ್ಚರವಾಗಿರಬೇಕೆಂದು ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ ಹೇಳಿದರು.
ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಛಲವಾದಿ ನಾರಾಯಣಸ್ವಾಮಿಯಂತಹ ಗುಲಾಮಿ ಹಾಗೂ ದುರ್ಬಲ ಮನಸ್ಥಿತಿಯುಳ್ಳ ನಾಯಕರನ್ನು ದಲಿತ ಮತ್ತು ಹಿಂದುಳಿದ ನಾಯಕರ ಮೇಲೆ ಛೂ ಬಿಡುವ ಮೂಲಕ ಕೋಮುವಾದಿ ಬಿಜೆಪಿ ಮತ್ತು ಆರ್‍ಎಸ್‍ಎಸ್‍ನವರು ಆಕ್ರಮಣಕಾರಿ ನೀತಿ ಪ್ರದರ್ಶಿಸುತ್ತಿದ್ದಾರೆ. ಇದರ ಭಾಗವಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವಹೇಳನಕಾರಿ ಪದ ಬಳಸಿ ನಿಂದಿಸಿದ್ದಾರೆಂದರು.
ಸಿದ್ದರಾಮಯ್ಯ ಅವರ ವಿರುದ್ದ ತೀರಾ ಕೀಳು ಮಟ್ಟದ ಅವಾಚ್ಯ ಪದ ಬಳಸಿ ಅವಹೇಳನ ಮಾಡಿರುವುದು ಖಂಡನೀಯ. ತಮ್ಮ ತಲೆಯ ಹಿಡಿತವನ್ನು ಬೇರೆಯವರ ಕೈಗೆ ಕೊಟ್ಟಿರುವುದರಿಂದಲೇ ಅವರು ಈ ರೀತಿ ಮಾತನಾಡುತ್ತಿದ್ದಾರೆ ಎಂದು ತಿಮ್ಮಯ್ಯ ಬೇಸರದಿಂದ ನುಡಿದರು.
ಇನ್ನು, ದಲಿತ ಹಾಗೂ ಹಿಂದುಳಿದ ವರ್ಗಗಳಲ್ಲದೆ ಇಡೀ ಜನಸಮೂಹದ ನಾಯಕ ಸಿದ್ದರಾಮಯ್ಯ ಅವರು ಎಂದೆಂದಿಗೂ ದಲಿತರ ಪರವಾಗಿದ್ದಾರೆ. ಅವರ ಆಡಳಿತದ ವೇಳೆ ದಲಿತ ನಾಯಕರಿಗೆ ಒಳ್ಳೆಯ ಖಾತೆ ನೀಡಿದ್ದಲ್ಲದೆ, ದಲಿತರ ಕಲ್ಯಾಣಕ್ಕಾಗಿ ಹಲವಾರು ಉಪಯುಕ್ತ ಯೋಜನೆ ರೂಪಿಸಿದರು.
ಅಲ್ಲದೆ, ಇಡೀ ದೇಶಕ್ಕೆ ಮಾದರಿಯಾಗುವಂತೆ ರಾಜ್ಯದಲ್ಲಿ ಮೊಟ್ಟ ಮೊದಲ ಬಾರಿಗೆ ದಲಿತ ಜನಸಂಖ್ಯೆಗೆ ಅನುಗುಣವಾಗಿ ಎಸ್‍ಸಿಪಿ, ಟಿಎಸ್‍ಪಿ ಯೋಜನೆ ಜಾರಿಗೆ ತಂದು ಶೇ. 24.01 ರ ಅನುದಾನ ನೀಡಲಾಯಿತು. ಕಾಮಗಾರಿಗಳ ಗುತ್ತಿಗೆಯಲ್ಲಿ 50 ಲಕ್ಷದವರೆಗೆ ದಲಿತರಿಗೆ ನೀಡುವ ಯೋಜನೆ ಜಾರಿ ಮಾಡಿದರು. ಸುಪ್ರೀಂಕೋರ್ಟ್ ಬಡ್ತಿ ಮೀಸಲಾತಿ ನೀಡಬಾರದೆಂದು ತೀರ್ಪು ನೀಡಿದ್ದರೂ ಸಹ ದಲಿತರ ಉದ್ಧಾರಕ್ಕಾಗಿ ಬಡ್ತಿ ಮೀಸಲಾತಿ ಜಾರಿಗೆ ತಂದರೆಂದರು.
ಇನ್ನು, ಜನಸಂಖ್ಯೆಗನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಳಿಗೆ ಮೀಸಲಾತಿ ಹೆಚ್ಚಿಸಲು ನ್ಯಾ. ನಾಗಮೋಹನದಾಸ್ ಆಯೋಗ ರಚಿಸಿದರು. ಹೀಗಿದ್ದರೂ ಅವರು ದಲಿತ ವಿರೋಧಿಯಾಗಿದ್ದಾರೆಂದು ಛಲವಾದಿ ನಾರಾಯಣಸ್ವಾಮಿ ಹೇಳುತ್ತಿರುವುದು ಖಂಡನೀಯ ಸಿದ್ದರಾಮಯ್ಯ ಅವರನ್ನು ಅವಹೇಳನ ಮಾಡಿದುದಕ್ಕಾಗಿ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಇದೇ ವೇಳೆ, ದಲಿತ ಅಪ್ರಾಪ್ತ ಹೆಣ್ಣು ಮಗುವಿನ ಮೇಲೆ ಮಠಾಧೀಶರೊಬ್ಬರು ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಾಗ ಒಬ್ಬನೇ ಒಬ್ಬ ಬಿಜೆಪಿ ಶಾಸಕರು ಖಂಡಿಸಲಿಲ್ಲ ಎಂದು ಬೇಸರಿಸಿದರು.
ಕಾಂಗ್ರೆಸ್ ಮುಖಂಡರಾದ ಎಡತೊರೆ ನಿಂಗರಾಜು, ಹರೀಶ್, ಶ್ರೀಧರ್, ಮೈಸೂರು ಬಸವಣ್ಣ ಹಾಜರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು