ಮೈಸೂರಿನ ವಿಭಜಿತ ಮಹಾರಾಜ ಪ್ರೌಢಶಾಲೆ, ಡಿಸಿ ಹಾಸ್ಟೇಲ್ 37 ವರ್ಷ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ
ಅಕ್ಟೋಬರ್ 16, 2022
ನಿಮಗೆ ಪಾಠ ಮಾಡಿದ್ದೂ ಸಾರ್ಥಕ ಎಂದು ಸಂಭ್ರಮಿಸಿದ ಶಿಕ್ಷಕರು
ವರದಿ-ನಜೀರ್ ಅಹಮದ್
ಮೈಸೂರು : ನಮ್ಮಿಂದ ಪಾಠ ಕಲಿತು 37 ವರ್ಷಗಳಾದರೂ ಶಿಷ್ಯರು ನಮ್ಮನ್ನು ನೆನಪಿಸಿಕೊಂಡು ಗೌರವಿಸುತ್ತಿರುವುದನ್ನು ನೋಡಿದರೆ ನಾವು ಪಾಠ ಮಾಡಿದ್ದೂ ಸಾರ್ಥಕ ಎಂದು ನಿವೃತ್ತ ಶಿಕ್ಷಕರಾದ ಸಂಜೀವಶೆಟ್ಟಿ ಹೇಳಿದರು. ನಗರದ ಪ್ರೆಸಿಡೆಂಟ್ ಹೋಟೆಲ್‍ನಲ್ಲಿ ಮೈಸೂರಿನ ಡಿಸಿ ಹಾಸ್ಟೇಲ್ ಹಾಗೂ ನಜರ್‍ಬಾದ್‍ನ ವಿಭಜಿತ ಮಹಾರಾಜ ಪ್ರೌಢಶಾಲೆ ಹಾಗೂ ಕಾಲೇಜಿನ 1985 ರಿಂದ 89 ರವರೆಗೆ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳು ಏರ್ಪಡಿಸಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಸನ್ಮಾನಿತರಾಗಿ ಅವರು ಮಾತನಾಡಿದರು.
ಗುರು-ಶಿಷ್ಯರ ಸಂಬಂಧ ತಾಯಿ ಮಕ್ಕಳ ಸಂಬಂಧವಿದ್ದರೇ ಮಾತ್ರ ಕಲಿಕೆ ಸುಗಮವಾಗುತ್ತದೆ. ಶಿಕ್ಷಕರಾದವರು ಕೇವಲ ಪಾಠ ಮಾಡೋಕ್ಕೆ ಮಾತ್ರ ಸೀಮಿತವಾಗಬಾರದು. ತಮ್ಮ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು. ಅವರಲ್ಲಿನ ಪ್ರತ್ಯೇಕ ಗುಣಗಳನ್ನು ಗುರುತಿಸಿ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ಅವರನ್ನು ಬೆಳೆಸಬೇಕು. ಅಲ್ಲದೇ ಗುರುಗಳು ಮಕ್ಕಳಿಗೆ ತಂದೆಯಾಗಿ, ತಾಯಿಯಾಗಿ, ಸಹೋದರನಾಗಿಯೂ ಸಲಹೆ, ಮಾರ್ಗದರ್ಶನ, ಧೈರ್ಯ, ಆತ್ಮಸ್ಥೈರ್ಯ ತುಂಬಬೇಕು. ಇದು ಮಕ್ಕಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿ ಅವರ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಗುರುವಂದನೆ ಸ್ವೀಕರಿಸಿದ ನಿವೃತ್ತ ಶಿಕ್ಷಕಿ ಕೆ.ಎಲ್.ಲೀಲಾವತಿ ಮಾತನಾಡಿ, ನಮ್ಮಿಂದ ಪಾಠ ಕಲಿತ ಮಕ್ಕಳು ಇಂದು ಉತ್ತಮ ಜೀವನ ನಡೆಸುತ್ತಾ ಸಮಾಜಕ್ಕೆ ಮಾದರಿಯಾಗಿದ್ದಾರೆ ಎನ್ನುವುದಕ್ಕೆ ಈ ಕಾರ್ಯಕ್ರಮವೇ ಸಾಕ್ಷಿ ಎಂದರು. ಮತ್ತೋರ್ವ ನಿವೃತ್ತ ಶಿಕ್ಷಕಿ ರತ್ನಮ್ಮ ಮಾತನಾಡಿ, ಹಳೆಯ ಶಿಷ್ಯರು ಸಂಘಟಿತ ಗೆಳೆಯಾಗಿ ಈ ಕಾರ್ಯಕ್ರಮ ರೂಪಿಸಿದ್ದು, ಅತ್ಯಂತ ಸಂತೋಷವಾಗಿದೆ. ಜತೆಗೆ ತಮ್ಮ ಕುಟುಂಬದವರನ್ನೂ ಕರೆತಂದು ತಮ್ಮ ಮಕ್ಕಳಿಗೆ ಈ ಕಾರ್ಯಕ್ರಮ ತೋರಿಸುತ್ತಿರುವುದು ಉತ್ತಮ ಬೆಳವಣಿಗೆ. ನಿಮ್ಮೊಂದಿಗೆ ಕಲಿತವರು ಅಥವಾ ಅವರ ಮಕ್ಕಳು ಆರ್ಥಿಕವಾಗಿ ಸಂಕಷ್ಟದಲ್ಲಿದ್ದರೆ ಅಂತಹ ಮಕ್ಕಳ ಶಿಕ್ಷಣಕ್ಕೆ ಸಹಾಯವಾಗುವ ರೀತಿಯಲ್ಲಿ ಕಾರ್ಯಕ್ರಮ ರೂಪಿಸಿ ಎಂದು ಸಲಹೆ ನೀಡಿದರು. ಕೆ.ಎಸ್.ಮುರಳೀಧರ್ ಮಾತನಾಡಿ, ಹಲವಾರು ವರ್ಷಗಳ ನಂತರ ಒಂದಾಗಿ ಸೇರಿದ್ದೇವೆ. ಬಹಳಷ್ಟು ಜನ ಉನ್ನತ ಹುದ್ದೆ ಪಡೆದಿದ್ದಾರೆ. ಕೆಲವರು ಉದ್ಯಮಿಗಳಾಗಿದ್ದಾರೆ ಎಲ್ಲರೂ ಒಟ್ಟಾಗಿ ಸಮಾಜದ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಕಾರ್ಯಕ್ರಮದ ರೂವಾರಿಗಳಾದ ಅವಿನಾಶ್, ರಮೇಶ್‍ಗೌಡ, ರಾಜೇಂದ್ರ, ಶಿವಮೂರ್ತಿ, ಆರ್.ಸಿ.ಚಂದ್ರಣ್ಣ, ಮಹೇಶ್ ಕುಮಾರ್, ಉದ್ಯಮಿಗಳಾದ ಬಸವರಾಜು, ಶ್ರೀನಿವಾಸ, ಶಿವಣ್ಣ, ಪೊಲೀಸ್ ಇಲಾಖೆಯ ರಮೇಶ್‍ಗೌಡ, ಶಿವಣ್ಣ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಸುರೇಶ್‍ಕುಮಾರ್ ಮುಂತಾದವರು ಇದ್ದರು.
0 ಕಾಮೆಂಟ್‌ಗಳು