ಯಲ್ಲಾದಹಳ್ಳಿ ಕೆರೆ ಬಯಲಿಗೆ ಭೇಟಿ, ಸಂತ್ರಸ್ತ ರೈತರ ಅಹವಾಲು ಸ್ವೀಕಾರ
ವರದಿ-ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೋಕಿನಾದಾದ್ಯಂತ ಮಳೆ ಅಬ್ಬರ ಜೋರಾಗಿದ್ದು, ಮುಟ್ಟನಹಳ್ಳಿ ಗ್ರಾಮದ ಸೂಳೆಕೆರೆಯ ಕೋಡಿ ಒಡೆದು ಅಪಾರ ಪ್ರಮಾಣದ ನಷ್ಟ ಸಂಭವಿಸಿದ್ದು ಸ್ಥಳಕ್ಕೆ ಮದ್ದೂರು ಶಾಸಕ ಡಿ.ಸಿ.ತಮ್ಮಣ್ಣ ಭಾನುವಾರ ಭೇಟಿ ನೀಡಿ ಶೀಘ್ರದಲ್ಲೇ ತಡೆಗೋಡೆ ನಿರ್ಮಿಸುವುದಾಗಿ ಹೇಳಿದರು.ಸುಮಾರು 120 ವರ್ಷಗಳ ಹಳೆಯ 900 ಎಕರೆ ವಿಸ್ತೀರ್ಣದಲ್ಲಿರುವ ದೊಡ್ಡಕೆರೆಯ ಕೊಡಿಯೂ ಒಡೆದು ಸುಮಾರು 20 ಎಕರೆ ಜಮೀನು ಹಾನಿಗೊಂಡಿದೆ. ಸೂಳೆಕೆರೆಯ ಸಂಪೂರ್ಣ ಅಭಿವೃದ್ಧಿಗೆ ಸುಮಾರು 100ಕೋಟಿ ರೂ. ಅಗತ್ಯವಿದ್ದು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ತಕ್ಷಣ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಳ್ಳುತ್ತೇನೆ ಎಂದರು.
ಸೂಳೆಕೆರೆಗೆ ಅಡ್ಡಲಾಗಿ ತಡೆಗೋಡೆ ನಿರ್ಮಾಣ ಮಾಡುವ ಯೋಜನೆಯನ್ನು ರೂಪಿಸುವಂತೆ ನೀರಾವರಿ ಅಧಿಕಾರಿಗಳಿಗೆ ಸೂಚಿಸಿದ ಅವರು, ನಕ್ಷೆ ತಯಾರಾದ ಕೂಡಲೇ ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಸಲ್ಲಿಸುತ್ತೇನೆ ಎಂದರು.
ನಂತರ ಕೆರೆಕೊಡಿ ಒಡೆದು ಹಾನಿಗೊಳಗಾದ ಪ್ರದೇಶದ ರೈತರ ಅಹವಾಲು ಸ್ವೀಕರಿಸಿ ಸ್ಥಳದಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿ ಹಾನಿಗೋಳಾದವರಿಗೆ ಶೀಘ್ರವಾಗಿ ಪರಿಹಾರ ಕಲ್ಪಿಸುವಂತೆ ತಾಕೀತು ಮಾಡಿದರು.
ಇದೇ ಸಂದರ್ಭದಲ್ಲಿ ಅವರು ಮಳೆಹಾನಿಗೆ ಒಳಗಾದ ಯಲಾದಹಳ್ಳಿ ಕೆರೆ ಬಳಿ ತೆರಳಿ ಕೊಡಿಬಿದ್ದು ಹಾನಿಯೊಳಗಾದ ಪ್ರದೇಶಗಳನ್ನು ವೀಕ್ಷಣೆ ನಡೆಸಿ ಸಂತ್ರಸ್ತ ರೈತರಿಗೆ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಜೆಡಿಎಸ್ ತಾಲೂಕು ಘಟಕದ ಅಧ್ಯಕ್ಷ ಚಿಕ್ಕತಿಮ್ಮೇಗೌಡ, ಯುವ ಮುಖಂಡರಾದ ಗುರುದೇವರಹಳ್ಳಿ ಆರು ಹಾಗೂ ಅಧಿಕಾರಿಗಳು ಇದ್ದರು.