ಅರಮನೆಯಲ್ಲಿ ದಸರಾ ವೈಭವ : ಬೀದಿಯಲ್ಲಿ ಹಕ್ಕುಪತ್ರಕ್ಕಾಗಿ ಕಪ್ಪುಬಟ್ಟೆ ಧರಿಸಿ ಅಲೆಮಾರಿಗಳ ಹೋರಾಟ 

ಮೈಸೂರು: ನಾಡಹಬ್ಬ ವಿಶ್ವವಿಖ್ಯಾತ ಮೈಸೂರು ದಸರಾ ಪ್ರಯುಕ್ತ ಅರಮನೆಯಲ್ಲಿ ಸಂಭ್ರಮ ಮನೆಮಾಡಿದ್ದರೆ, ಇತ್ತ ಜಿಲ್ಲಾಧಿಕಾರಿಗಳ ಕಚೇರಿ ಎದುರು ಕಳೆದ 20 ದಿನಗಳಿಂದಲೂ ಅಲೆಮಾರಿಗಳು ತಮ್ಮ ನಿವೇಶನದ ಹಕ್ಕು ಪತ್ರ ನೀಡಿ ಎಂದು ಆಹೊರಾತ್ರಿ ಧರಣಿ ನಡೆಸುತ್ತಿದ್ದಾರೆ.

ದಸಂಸ ನೇತೃತ್ವದಲ್ಲಿ ನಡೆಯುತ್ತಿರುವ ಅಲೆಮಾರಿಗಳ ಧರಣಿ ಜಂಬೂಸವಾರಿ ಮೆರವಣಿಗೆಯ ದಿನವಾದ ಬುಧವಾರ ಜಿಲ್ಲಾಡಳಿತದ ನಿರ್ಲಕ್ಷ್ಯ ವಿರುದ್ಧ ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡಲು ಮುಂದಾಗಿದ್ದರಾದರೂ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮತ್ತು ಕಾನೂನು ಸುವ್ಯವಸ್ಥೆ ಡಿಸಿಪಿ ಪ್ರದೀಪ್ ಗುಂಟಿ ಅವರು ಮಾತನಾಡಿ, ಮುಖ್ಯಮಂತ್ರಿಗಳ ಪ್ರತಿಕೃತಿ ದಹನ ಮಾಡುವುದರಿಂದ ಮೈಸೂರಿಗೆ ಕಳಂಕ ಬರಲಿದೆ ಹಾಗಾಗಿ ಪ್ರತಿಕೃತಿ ದಹಿಸಬೇಡಿ ದಸರಾ ಮುಗಿದ ನಂತರ ಸಮಸ್ಯೆ ಬಗೆಹರಿಸುವುದಾಗಿ ಮನವಿ ಮಾಡಿದ್ದರಿಂದ ದಹನ ಕೈಬಿಟ್ಟು ಅಲೆಮಾರಿಗಳು ಕಪ್ಪು ಬಟ್ಟೆಯನ್ನೇ ತೊಟ್ಟು ಪ್ರತಿಭಟನೆ ನಡೆಸುತ್ತಿದ್ದಾರೆ.

ಧರಣಿ ನಿರತೆ ಭಾಗ್ಯಮ್ಮ ಮಾತನಾಡಿ, ಅಲ್ಲಿ ದಸರಾ ಹೆಸರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಅಧಿಕಾರಿಗಳು ಮೋಜು ಮಾಡುತ್ತಿದ್ದಾರೆ. ಇಲ್ಲಿ ನಾವುಗಳು ಮಕ್ಕಳಿಗೆ ಊಟ ಇಲ್ಲದೆ ಹಕ್ಕು ಪತ್ರ ನೀಡುವಂತೆ ಹೋರಾಟ ನಡೆಸುತ್ತಿದ್ದೇವೆ. ಇದು ಯಾವ ನ್ಯಾಯ, ನಮ್ಮ ನೋವು ಇವರಿಗೆ ತಟ್ಟದೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

20 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಜಿಲ್ಲಾಡಳಿತ ನಮ್ಮ ಸಮಸ್ಯೆ ಬಗೆ ಹರಿಸಲಿಲ್ಲ. ಇನ್ನುಮುಂದೆ ನಮ್ಮ ಹೋರಾಟ ವಿನೂತನವಾಗಿ ನಡೆಯಯತ್ತದೆ. ಮುಂದೆ ಆಗುವ ಅನಾಹುತಕ್ಕೆ ಜಿಕ್ಲಾಡಳಿತವೇ ಹೊಣೆಯಾಗಲಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ ಎಚ್ಚರಿಕೆ ನೀಡಿದರು.





 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು