ಕೌದಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅನೈರ್ಮಲ್ಯ : ಸಾಂಕ್ರಮಿಕ ರೋಗದ ಭೀತಿ, ಪಂಚಾಯ್ತಿ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರ ಆಕ್ರೋಶ

ವರದಿ-ಶಾರುಕ್ ಖಾನ್, ಹನೂರು
ಹನೂರು : ಭೌಗಳಿಕವಾಗಿ ವಿಸ್ತಾರ ಹೊಂದಿರುವ ತಾಲ್ಲೂಕಿನ ಕೌದಳ್ಳಿ ಗ್ರಾಮದಲ್ಲಿ ಮಲೆ ಮಹದೇಶ್ವರಬೆಟ್ಟಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ ಬದಿಯ ಮಹದೇಶ್ವರ  ದೇವಾಲಯದ ಮುಂದೆ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದ್ದರೂ, ದುರಸ್ತಿಗೆ ಮುಂದಾಗದ ಗ್ರಾಮ ಪಂಚಾಯ್ತಿ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪೈಪ್ ಒಡೆದ ಪರಿಣಾಮ ನೀರು ಸೋರಿಕೆಯಾಗಿ ರಸ್ತೆಯಲ್ಲಾ ಕೆಸರುಮಯವಾಗಿದ್ದು, ಗುಂಡಿಗಳು ಭರ್ತಿಯಾಗಿ ಸಾರ್ವಜನಿಕರು ಮತ್ತು ವಾಹನ ಸಂಚಾರಕ್ಕೆ ಅನಾನುಕೂಲವಾಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕ ವಾಹನ ಸಂಚಾರ ಹೆಚ್ಚಾಗಿದ್ದು, ಅಪಘಾತಗಳಾಗುವ ಸಂಭವವೂ ಇದೆ.
ಒಡೆದ ಪೈಪ್‌ನಿಂದ ನೀರು ಸೋರಿಕೆಯಾಗುತ್ತಿರುವ ಸಮೀಪದಲ್ಲಿರುವ ೪ ಮತ್ತು ೫ನೇ ವಾರ್ಡ್ಗೆ ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ. ಸ್ಥಳದಲ್ಲಿ ಅನೈರ್ಮಲ್ಯ ಉಂಟಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಮಿಕ ರೋಗ ಹರಡುವ ಭೀತಿ ಎದುರಾಗಿದೆ. ಈ ಬಗ್ಗೆ ಹಲವಾರು ಬಾರಿ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಕೂಡಲೇ ಒಡೆದ ಪೈಪನ್ನು ರಿಪೇರಿ ಮಾಡಿಸಬೇಕು ಇಲ್ಲದಿದ್ದಲ್ಲಿ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾಗಿಳಿಗೆ ದೂರು ನೀಡಬೇಕಾಗುತ್ತದೆ ಎಂದು ಗ್ರಾಮಸ್ಥರು ಪಂಚಾಯ್ತಿ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.