ನನ್ನ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರು ನನಗೆ ಸಂಗೀತದ ಜತೆ ಪ್ರೀತಿ ಕೊಟ್ಟರು : ರಾಜೀವ್ ತಾರಾನಾಥ್

ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್‍ರ 91ನೇ ಹುಟ್ಟುಹಬ್ಬ ಆಚರಣೆ  

ವರದಿ-ನೇರಳೆ ಸತೀಶ್ ಕುಮಾರ್

ಮೈಸೂರು : ಖ್ಯಾತ ಸರೋದ್ ಮಾಂತ್ರಿಕ ಪಂಡಿತ್ ರಾಜೀವ್ ತಾರಾನಾಥ್ ಅವರ 91ನೇ ಹುಟ್ಟುಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು. 
ಸರಸ್ವತಿಪುರಂ ಜೆಎಸ್‍ಎಸ್ ಮಹಿಳಾ ಕಾಲೇಜಿನ ನವಜ್ಯೋತಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ರಾಜೀವರ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿತು. ಸರೋದ್ ಸ್ವರಯಾನ 2ನೇ ಮುದ್ರಣ ಲೋಕಾರ್ಪಣೆ ಮಾಡಲಾಯಿತು. ರಾಜೀವರ ಶಿಷ್ಯರು ಸರೋದ್ ಕಾರ್ಯಕ್ರಮ ನೀಡಿದರು. 
ಸನ್ಮಾನ ಸ್ವೀಕರಿಸಿ ಮಾತನಾಡಿದ ಪಂಡಿತ್ ರಾಜೀವ್ ತಾರಾನಾಥ್ ಅವರು, ಸಂಗೀತದಲ್ಲಿ ದಿಲ್ದಾರ್ ಇದೆ. ದೊಡ್ಡ ಹೃದಯವಿದೆ. ನಮ್ಮ ಜಾತಿಯವರಲ್ಲ ಎಂಬ ಕಾರಣಕ್ಕೆ ಅವರನ್ನು ನೆನಪಿಸುವ ಕ್ಷಮತೆ ಕಳೆದುಕೊಂಡಿದ್ದೇವೆ. ಅವರನ್ನು ಒಪ್ಪಿ ಕಾಲಿಗೆ ಬಿದ್ದು, ಸಂಗೀತ ಕಲಿತೆವು. ಅದನ್ನು ಮರೆಯಬಾರದು. ನನ್ನ ಗುರು ಉಸ್ತಾದ್ ಅಲಿ ಅಕ್ಬರ್ ಖಾನ್ ಸಾಹೇಬರು ಪ್ರೀತಿ ಕೊಟ್ಟರು. ಒಂದು ರೂಪಾಯಿ ತೆಗೆದುಕೊಳ್ಳದೇ ಸಂಗೀತ ಕಲಿಸಿದರು. ಪ್ರೀತಿಯಿಂದ ಬೈದರು. ಅವರೇ ನನ್ನ ಸಂಗೀತ ದೇವರು ಎಂದರು.
ಈ ನಮ್ಮ ಕರ್ನಾಟಕದೊಳಗೆ ಎಷ್ಟರ ಮಟ್ಟಿಗೆ ಬೇರೆ ಬೇರೆ ಸಂಗೀತಗಳಿವೆ ಗಮನಿಸಬೇಕು. ಉಪಖಂಡದೊಳಗೆ ಎರಡು ಅಭಿಜಾತ ಸಂಗೀತಗಳು ಬದುಕಿವೆ. ಬೆಳೆದಿವೆ. ಇದೂ ಈಗಲೂ ಉಳಿದಿದೆಯೇ? ವಿಚಾರ ಮಾಡಿದಾಗ ಬೇಸರ ಬರುತ್ತದೆ. ಅನೇಕರು ಕರುನಾಡಿಗೆ ಸಿಹಿಯನ್ನು ಹಂಚಿದರು. ಇವತ್ತು ಬೇವಿನ ರಸ ಕುಡಿಯುತ್ತಿದ್ದೇವೆ ಅನಿಸುತ್ತದೆ. ಸಿಹಿ ಕುಡಿಯುವಂತಾಗಬೇಕು. 
ಇವ ಅದು, ಅವ ಇದು ಎನ್ನುತ್ತ ಭೂಮಿ ಒಡೆದು ಬಿಡೋದು. ಸಂವೇದನೆ, ವಿವೇಚನೆ, ಸಹನೆ ಇವುಗಳಿಗೆ ಮನಸ್ಸು ಕೊಡಬೇಕು. ಸಂಗೀತದಲ್ಲಿ ಇದೆಲ್ಲ ಸಿಗುತ್ತದೆ. ಸಂಗೀತಗಾರ ಮಸೀದಿ, ಗುಡಿಗೆ ಹೋಗುತ್ತಾನೆ. ಸಂಗೀತಗಾರ ಸಂಗೀತದಲ್ಲಿ ಬದುಕಿ, ಸಂಗೀತದಲ್ಲಿಯೇ ಸಾಯುತ್ತಾನೆ ಎಂದರು. 
ಜ್ಞಾನಪೀಠ ಪ್ರಶಸ್ತಿ ಪುರಸ್ಕøತ ಚಂದ್ರಶೇಖರ ಕಂಬಾರ ಮಾತನಾಡಿ, ನವ್ಯಕಾಲದಲ್ಲಿ ಗೋಕಾಕ್ ಮತ್ತು ಅಡಿಗರು ಎರಡು ಕವಲುಗಳು. ನವ್ಯವೆಂದರೇನು ತಿಳಿಯದು. ನವ್ಯ ಬಿಟ್ಟು ತನ್ನದೇ ಶೈಲಿಯಲ್ಲಿ ಕಾವ್ಯ ಬರೆದೆ. ರಾಜೀವರು ಒಪ್ಪಿದರು. ಆ ದಿನದಿಂದಲೂ ರಾಜೀವರೊಂದಿಗೆ ಸಂಬಂಧವಿದೆ. ಈಗಲೂ ಬರೆದಿದ್ದನ್ನು ತೋರಿಸಿದ್ದೇನೆ ಎಂದು ತಿಳಿಸಿದರು. 
ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಮನು ಬಳಿಗಾರ್ ಮಾತನಾಡಿ, ರಾಜೀವ್ ತಾರಾನಾಥರು ಕಲೆ, ಸಾಹಿತ್ಯ, ಜೀವನ ಅನುಭವ, ಸಾಮಾಜಿಕ ವ್ಯವಸ್ಥೆಯನ್ನು ಸಂಗೀತದ ಮೂಲಕ ಗ್ರಹಿಸುತ್ತಾರೆ. ಪರ್ವತದಂತೆ ಕಾಣುವ ರಾಜೀವರು ಇನ್ನೂ ಎತ್ತರಕ್ಕೆ ಹೋಗಲು ಬಯಸುತ್ತಾರೆ. ಅದಕ್ಕಾಗಿ ಕಠಿಣ ಪರಿಶ್ರಮ ಪಡುತ್ತಾರೆ ಎಂದು ಹೇಳಿದರು. 
ಸಾರಂಗಿ ವಾದಕ ಉಸ್ತಾದ್ ಫೈಯಾಜ್ ಖಾನ್ ಮಾತನಾಡಿ, ರಾಜೀವ್ ತಾರಾನಾಥರು ಸಂಗೀತದ ಗಂಗೆ. ಹರಿಸುತ್ತಲೇ ಇದ್ದಾರೆ. ಗಂಗೆಯμÉ್ಟೀ ಶುದ್ಧ, ಸ್ವಚ್ಛ. ಇವರ ಬಗ್ಗೆ ಮಾತಾಡುವುದೆಂದರೆ ಶಬ್ಧಗಳು ಸಣ್ಣದಾಗುತ್ತವೆ. ವ್ಯಕ್ತಿತ್ವ ದೊಡ್ಡದಾಗಿ ನಿಲ್ಲುತ್ತದೆ ಎಂದರು. 
ಉಸ್ತಾದ್ ಅಲಿ ಅಕ್ಬರ್ ಖಾನ್, ಪಂ.ರವಿಶಂಕರ್, ಅನ್ನಪೂರ್ಣದೇವಿ ಅವರಿಂದ ಕಲಿಯೋದು ಬಹಳ ದೊಡ್ಡದು. ಅದಕ್ಕೆ ದೇವರಿಂದ ವರ ಪಡೆದಿರಬೇಕು. ಅವರ ಪ್ರತಿ ಸ್ವರದಲ್ಲೂ ಆತ್ಮದ ಸಂಗೀತ ಇದೆ. ಒಂದು ಸ್ವರದಿಂದ ಮತ್ತೊಂದು ಸ್ವರಕ್ಕೆ ಹೋಗುವ ಮಧ್ಯದೊಳಗಿನ ರಾಗದ ಸ್ವರೂಪವನ್ನು ರಾಜೀವರಿಂದ ಕಲಿತೆ ಎಂದು ಹೇಳಿದರು.
ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉಪಸ್ಥಿತರಿದ್ದರು.