ಅಲೆಮಾರಿಗಳ ಅಹೋರಾತ್ರಿ ಹೋರಾಟಕ್ಕೆ ಮುವತ್ತು ದಿನ

ಈಡೇರದ ಬೇಡಿಕೆ, ಪ್ರಗತಿಪರ, ಕಾರ್ಮಿಕ, ರೈತ ಸಂಘಟನೆಗಳ ಬೆಂಬಲ

ಮೈಸೂರು : ನಿವೇಶನ ಹಕ್ಕು ಪತ್ರಕ್ಕಾಗಿ ಕಳೆದ 30 ದಿನಗಳಿಂದ ಅಹೋರಾತ್ರಿ ಧರಣಿ ನಡೆಸುತ್ತಿರುವ ಅಲೆಮಾರಿ ಸಮುದಾಯದವರಿಗೆ ಪ್ರಗತಿಪರ, ಕಾರ್ಮಿಕ ಮತ್ತು ರೈತ ಸಂಘಟನೆಗಳು ಬೆಂಬಲ ಸೂಚಿಸಿ ಧರಣಿಯಲ್ಲಿ ಪಾಲ್ಗೊಂಡರು.
ನಗರದ ಜಿಲ್ಲಾದಿಕಾರಿಗಳ ಕಚೇರಿ ಮುಂಭಾಗ ಕಳೆದ 30 ದಿನಗಳಿಂದ ಅಲೆಮಾರಿ ಸಮುದಾಯದವರ ತಮ್ಮ ನಿವೇಶನದ ಹಕ್ಕು ಪತ್ರ ನೀಡುವಂತೆ ಪ್ರತಿಭಟನೆ ನಡೆಸುತ್ತಿದ್ದು, ಇವರ ಸಮಸ್ಯೆ ಬಗೆಹರಿಸುವಲ್ಲಿ ವಿಫಲವಾದ ಜಿಲ್ಲಾಡಳಿತದ ನಡೆ ವಿರುದ್ಧ ಪ್ರಗತಿಪರ ಸಂಘಟನೆಗಳವರು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಹಿರಿಯ ಸಮಾಜವಾದಿ ಪ.ಮಲ್ಲೇಶ್ ಮಾತನಾಡಿ, ಕಳೆದ 20 ವರ್ಷಗಳಿಂದ ಅಲೆಮಾರಿ ಸಮುದಾಯದವರು ಏಕಲವ್ಯ ನಗರದಲ್ಲಿ ವಾಸಿಸುತ್ತಿದ್ದಾರೆ. ಅವರು ಅಲ್ಲಿ ಗುಡಿಸಲುಗಳನ್ನು ನಿರ್ಮಾಣಮಾಡಿಕೊಂಡು ಆಧಾರ್, ರೇಷನ್ ಕಾರ್ಡ್ ಮತ್ತು ಮತದಾನದ ಗುರುತಿನ ಚೀಟಿಯನ್ನು ಹೊಂದಿದ್ದಾರೆ. ಇವರಿಗೆ ಹಕ್ಕು ಪತ್ರ ನೀಡುವುದಾಗಿ ಭರವಸೆ ನೀಡಿದ ರಾಜಕಾರಣಿಗಳು ಇದೀಗ ರಿಯಲ್ ಎಸ್ಟೇಟ್ ಮಾಫಿಯಾದೊಂದಿಗೆ ಕೈಜೋಡಿಸಿ ಆ ಜಾಗವನ್ನು ಹೊಡೆಯುವ ಪ್ರಯತ್ನಕ್ಕೆ ಕೈಹಾಕಿದ್ದಾರೆ ಎಂದು ಕಿಡಿಕಾರಿದರು.
ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದ್ದು, ಇನ್ನೆರಡು ದಿನಗಳಲ್ಲಿ ಸಮಸ್ಯೆ ಪರಿಹರಿಸದಿದ್ದರೆ ಎಲ್ಲಾ ಸಂಘಟನೆಗಳೊಡಗೂಡಿ ಜಿಲ್ಲಾಧಿಕಾರಿಗಳಿಗೆ ಮುತ್ತಿಗೆ ಹಾಕೋಣ ಎಂದು ಹೇಳಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಮಾತನಾಡಿ, ಅಲೆಮಾರಿ ಸಮುದಾಯದವರು ಒಂದು ತಿಂಗಳಿಂದ ತಮ್ಮ ಕೂಲಿ ಕೆಲಸವನ್ನು ಬಿಟ್ಟು ಹೆಂಡತಿ ಮಕ್ಕಳು ಮರಿಗಳೊಂದಿಗೆ ಬೀದಿಯಲ್ಲಿ ನಿಂತು ಹೋರಾಟ ಮಾಡುತ್ತಿದ್ದರೂ ಜಿಲ್ಲಾಡಳಿತ ಮತ್ತು ಜಿಲ್ಲಾ ಮಂತ್ರಿಗಳಿಗೆ ಕಣ್ಣು, ಕಿವಿ ಮೂಗು ಇಲ್ಲದಂತಾಗಿದೆ. ಬಡವರ ಕಷ್ಟ ನೋವು ಇವರಿಗೆ ತಟ್ಟದೆ ಬಿಡುವುದಿಲ್ಲ, ಅಲೆಮಾರಿ ಸಮುದಾಯಕ್ಕೆ ನ್ಯಾಯ ಸಿಗುವವರೆಗೂ ಈ ಹೋರಾಟ ನಿಲ್ಲುವುದಿಲ್ಲ ಮುಂದಿನ ದಿನಗಳಲ್ಲಿ ಈ ಹೋರಾಟವನ್ನು ಮತ್ತಷ್ಟು ಉಗ್ರ ರೂಪದಲ್ಲಿ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದೇ ವೇಳೆ ಕಾರ್ಮಿಕ ಮುಖಂಡ ಚಂದ್ರಶೇಖರ ಮೇಟಿ, ಪ್ರಗತಿಪರ ಚಿಂತಕ ನಾ.ದಿವಾಕರ, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ದಸಂಸ ಮುಖಂಡರುಗಳಾದ ಹಾರೋಹಳ್ಳಿ ನಟರಾಜ್, ಕಿರಂಗೂರು ಸ್ವಾಮಿ, ಭಾಗ್ಯಮ್ಮ, ರೈತ ಮುಖಂಡರುಗಳಾದ ಬೊಕ್ಕಹಳ್ಳಿ ನಂಜುಂಡಸ್ವಾಮಿ, ಮಂಡಕಳ್ಳಿ ಮಹೇಶ್, ಬೊಕ್ಕಹರಳಹಳ್ಳಿ ಮಹದೇವಸ್ವಾಮಿ, ಪಿ.ಮರಂಕಯ್ಯ ಸೇರಿದಂತೆ ಹಲವಾರು ಮುಖಂಡರುಗಳು ಉಪಸ್ಥಿತರಿದ್ದರು.
 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು