ಭಾರತ್ ಜೋಡೋ ಪಾದಯಾತ್ರೆ ಭರ್ಜರಿ ಯಶಸ್ಸಿಗೆ ಶಾಸಕ ತನ್ವೀರ್ ಸೇಠ್ ಕೊಡುಗೆ ಅಪಾರ : ಸೈಯದ್ ಫಾರೂಖ್


 ಮೈಸೂರು : ನಗರದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಪಾದಯಾತ್ರೆ ಯಶಸ್ಸಿಗೆ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಅವರ ಪರಿಶ್ರಮ ಅಪಾರವಾಗಿದೆ ಎಂದು ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಸಂಘಟನಾ ಕಾರ್ಯದರ್ಶಿ ಸೈಯದ್ ಫಾರೂಖ್ ಹೇಳಿದ್ದಾರೆ.

ಮಂಗಳವಾರ ಮೈಸೂರಿನಲ್ಲಿ ಮಾತನಾಡಿದ ಅವರು, ರಾಹುಲ್ ಗಾಂಧಿ ತಮ್ಮ ಭಾರತ್ ಜೋಡೋ ಪಾದಯಾತ್ರೆ ಮೂಲಕ ದೇಶದಲ್ಲಿ ಒಡೆದ ಮನಸ್ಸುಗಳನ್ನು ಒಗ್ಗೂಡಿಸುತ್ತಿದ್ದಾರೆ. ಇದೊಂದು ಐತಿಹಾಸಿಕ ಪಾದಯಾತ್ರೆ ಎಲ್ಲ ಪಕ್ಷ, ಜಾತಿ, ಧರ್ಮ ಬೇಧಗಳನ್ನು ಮರೆತು ಜನರು ಅಭೂತಪೂರ್ವಕವಾಗಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ಹಾರ್ಡಿಂಜ್ ವೃತ್ತದಿಂದ ಹೊರಟ ಪಾದಯಾತ್ರೆ ರಿಂಗ್ ರಸ್ತೆಯ ಮಣಿಪಾಲ್ ಆಸ್ಪತ್ರೆ ತನಕ ಕಿಕ್ಕಿರಿದ ಜನರಿಂದ ತುಂಬಿತ್ತು. ವಿಶೇಷವಾಗಿ ಮೀಲಾದ್ ಪಾರ್ಕ್, ಮಸ್ಜಿದೇ ಆಝಂ, ಫೌಂಟನ್ ವೃತ್ತ ಮತ್ತು ಟಿಪ್ಪು ಸರ್ಕಲ್‌ನಲ್ಲಿ ಲಕ್ಷಕ್ಕೂ ಹೆಚ್ಚು ಮುಸ್ಲಿಂ ಜನಾಂಗದವರು ಸೇರಿದ್ದರು. ಇವರೆಲ್ಲರೂ ತನ್ವೀರ್ ಸೇಠ್ ಅಭಿಮಾನಿಗಳಾಗಿದ್ದುದು ವಿಶೇಷವಾಗಿತ್ತು. ಪಾದಯಾತ್ರೆಗೆ ಮೂರು ದಿನ ಮುಂಚಿತವಾಗಿ ಕ್ಷೇತ್ರದ ಎಲ್ಲ ಮುಖಂಡರು, ಕಾರ್ಯಕರ್ತರು ಯಶಸ್ಸಿಗೆ ಶ್ರಮಿಸಿದ್ದು ಸಾರ್ಥಕವಾಯಿತು ಎಂದು ಅವರು ಕಾಂಗ್ರೆಸ್ ಕಾರ್ಯಕರ್ತರು ಮತ್ತು ಅಭಿಮಾನಿಗಳಿಗೆ ಕೃತಜ್ಞತೆ ಸಲ್ಲಿಸಿದರು.

ಮೈಸೂರಿನಲ್ಲಿ ಭಾರತ್ ಜೋಡೋ ಯಶಸ್ಸಿನಿಂದ ವಿರೋಧ ಪಕ್ಷಗಳು ಕಂಗೆಟ್ಟಿವೆ. ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವುದು ಖಚಿತವಾಗಿದೆ ಎಂದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು