ಪತ್ರಕರ್ತರಿಗೆ ಉಡುಗೊರೆ ರೂಪದಲ್ಲಿ ಲಂಚ : ನ್ಯಾಯಾಂಗ ತನಿಖೆಗೆ ಸಿದ್ದರಾಮಯ್ಯ ಒತ್ತಾಯ
ಅಕ್ಟೋಬರ್ 31, 2022
ನಂದೀಶ್ ಸಾವಿನ ಹೊಣೆ ಸರ್ಕಾರವೇ ಹೊರಬೇಕು
ಮೈಸೂರು : ಪತ್ರಕರ್ತರಿಗೆ ಉಡುಗೊರೆ ರೂಪದಲ್ಲಿ ಹಣ ನೀಡಲಾಗಿದೆ ಎನ್ನುವ ಪ್ರಕರಣವನ್ನು ರಾಜ್ಯ ಸರ್ಕಾರ ಕೂಡಲೇ ನ್ಯಾಯಾಂಗ ತನಿಖೆಗೆ ಒಳಪಡಿಸಬೇಕೆಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದರು. ಸೋಮವಾರ ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿಗಳ ಕಾರ್ಯಾಲಯದಿಂದ ಪತ್ರಕರ್ತರಿಗೆ ಉಡುಗೊರೆ ರೀತಿಯಲ್ಲಿ ಲಂಚ ನೀಡಿರುವುದು ನೋಡಿದರೆ, ಸರ್ಕಾರದ ಭ್ರಷ್ಟಾಚಾರ ವನ್ನು ಮುಚ್ಚಿಹಾಕಲು ಪ್ರಯತ್ನ ಪಡುವ ರೀತಿಯಲ್ಲಿದೆ. ಮುಖ್ಯಮಂತ್ರಿಗಳು ಕೂಡಲೇ ಈ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಳಪಡಿಸಿ ಸತ್ಯಾಸತ್ಯತೆಯನ್ನು ರಾಜ್ಯದ ಜನತೆಗೆ ತಿಳಿಸುವ ಕಾರ್ಯ ಮಾಡಬೇಕಿದೆ ಎಂದು ಹೇಳಿದರು. ಹಲವಾರು ಪತ್ರಕರ್ತರು ಈ ಉಡುಗೊರೆಯನ್ನು ಹಿಂತಿರುಗಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪತ್ರಕರ್ತರನ್ನು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿಸುವ ಕಾರ್ಯ ಸಿಎಂ ಕಚೇರಿಯಲ್ಲೇ ನಡೆಯುತ್ತಿದೆ ಎಂದು ವ್ಯಂಗ್ಯವಾಡಿದರು. ಮೀಸಲಾತಿ ಹೆಚ್ಚಳ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಬಿಜೆಪಿಯ ನಾಯಕರು ಹಾಗೂ ಮುಖ್ಯಮಂತ್ರಿಗಳು ಪ್ರತಿದಿನ ಸುಳ್ಳು ಆಶ್ವಾಸನೆ ನೀಡುತ್ತಿದ್ದಾರೆ. ರಾಜ್ಯದಲ್ಲಿ ಗುತ್ತಿಗೆದಾರರ ಬಿಲ್ ಪಾವತಿಗೆ 40 ಪರ್ಸೆಂಟ್ ಲಂಚ ಕೇಳುತ್ತಿದ್ದು, ಲಂಚ ನೀಡಲಾಗದ ಗುತ್ತಿಗೆದಾರರು ದಯಾಮರಣಕ್ಕೆ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಮನವಿ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ ಲಂಚ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಮುಖ್ಯಮಂತ್ರಿಗಳು ನೈತಿಕತೆ ಹೊತ್ತು ಕೂಡಲೇ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ಹೆಚ್ಚಳ ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದ ಪ್ರಿಯಾಂಕ ಖರ್ಗೆ ರವರು ನಾಗಮೋಹನ್ ದಾಸ್ ನೇತೃತ್ವದ ಆಯೋಗ ರಚನೆ ಮಾಡಿದ ಹಿನ್ನೆಲೆಯಲ್ಲಿ ಇಂದು ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಮೀಸಲಾತಿ ಹೆಚ್ಚಾಗಿದೆ. ಶಡ್ಯುಲ್ 9ರ ಸಂವಿಧಾನದ ಮುಖಾಂತರ ಮೀಸಲಾತಿಯನ್ನು ಜಾರಿ ಮಾಡಿದರೆ ಮಾತ್ರ ಆ ವರ್ಗದ ಜನರಿಗೆ ನ್ಯಾಯ ಸಿಗಲಿದೆ ಎಂದು ಹೇಳಿದರು. ಅಮಾನತ್ತಾಗಿದ್ದ ಪೊಲೀಸ್ ಅಧಿಕಾರಿ ನಂದೀಶ್ ಸಾವಿನ ಕುರಿತು ಸಚಿವ ಎಂಟಿಬಿ ನಾಗರಾಜ್ ನೀಡಿರುವ ಹೇಳಿಕೆ ರಾಜ್ಯ ಸರ್ಕಾರದ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದೆ ಎಂದು ಆರೋಪಿಸಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, 70-80 ಲಕ್ಷ ಕೊಟ್ಟು ವರ್ಗಾವಣೆ ಮಾಡಿಸಿಕೊಂಡವರಿಗೆ ಏನನ್ನೂ ಮಾಡಿಕೊಳ್ಳಲು ಬಿಡದಿದ್ದರೇ ಹೃದಯಾಘಾತ ಆಗದೇ ಇನ್ನೇನಾಗುತ್ತದೆ ಎಂದು ಎಂ ಟಿ ಬಿ ನಾಗರಾಜ್ ಹೇಳಿದ್ದಾರೆ. ಹಾಗಾದರೆ ಅಷ್ಟೋಂದು ಹಣ ಯಾರಿಗೆ ಸಂದಾಯವಾಗಿದೆ? ನಂದೀಶ್ ಸಾವಿನ ಹೊಣೆಯನ್ನು ಸರ್ಕಾರವೇ ಹೊರಬೇಕು. ಮುಖ್ಯಮಂತ್ರಿ, ಗೃಹ ಸಚಿವರು ಹೊಣೆ ಹೊರಬೇಕು ಎಂದು ಸಿದ್ಧರಾಮಯ್ಯ ಹೇಳಿದರು.
0 ಕಾಮೆಂಟ್‌ಗಳು