ಎತ್ತ ನೋಡಿದರೂ ಗುಂಡಿಗಳ ದರ್ಶನ ಹೆಜ್ಜೆ ಹೆಜ್ಜಗೂ ಅಪಾಯಕ್ಕೆ ಆಹ್ವಾನ
ವರದಿ-ಶಾರುಕ್ ಖಾನ್, ಹನೂರು
ಹನೂರು : ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಚಿಗತಪುರ ಗ್ರಾಮದ ರಸ್ತೆ ಚಿಂದಿ ಚಿತ್ರಾನ್ನವಾಗಿದ್ದು, ಜನಸಂಚಾರಕ್ಕೆ ತೀವ್ರ ಅನಾನುಕೂಲವಾಗಿದೆ. ಎಲ್ಲೇಮಾಳ ಕೇಂದ್ರ ಸ್ಥಾನದಿಂದ ಸರ್ಕಾರಿ ಪ್ರೌಢಶಾಲೆ ಮುಖ್ಯ ರಸ್ತೆಯಲ್ಲಿ ನೂರಾರು ಗುಂಡಿಗಳು ಬಿದ್ದಿದ್ದು, ದ್ವಿಚಕ್ರ ವಾಹನಗಳ ಸರಣಿ ಅಪಘಾತಗಳೇ ನಡೆದಿವೆ.
ಎಲ್ಲೇಮಾಳ ಗ್ರಾಮದಿಂದ ಗುಳ್ಯ ಸೇರಿದಂತೆ ಚಿಗತಪುರ ರಸ್ತೆ ಸುತ್ತಮುತ್ತಲಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ಮಾರ್ಗದಲ್ಲಿ ತೆರಳುವ ಜನರಿಗೆ ಮತ್ತು ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಈ ರಸ್ತೆಗೆ ಇಳಿಯಬೇಕಿದೆ. ಈ ಬಗ್ಗೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ರಸ್ತೆ ದುರಸ್ತಿಗೆ ಮನವಿ ಸಲ್ಲಿಸಿದರೂ ಅವರು ಕೇವಲ ಭರವಸೆ ನೀಡುವುದರಲ್ಲೇ ಕಾಲ ಕಳೆಯುತ್ತಿದ್ದು, ಕಾಮಗಾರಿಯಂತೂ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ತಾಲೂಕಿನ ಶಾಗ್ಯ-ಬಂಡಳ್ಳಿ ರಸ್ತೆ ಸೇರಿದಂತೆ ಬೈರನತ್ತ, ಮಣಗಳ್ಳಿ ಮಾರ್ಗವಾಗಿ ತೆರಳುವ ಚಿಂಚಳ್ಳಿ ಮುಖ್ಯ ರಸ್ತೆಗಳಲ್ಲಿಯೂ ಹಲವಾರು ಗುಂಡಿ ಬಿದ್ದಿದ್ದು ಅನೇಕ ಬಾರಿ ವಾಹನ ಸವಾರರು ಬಿದ್ದು ನೋವು ಮಾಡಿಕೊಂಡಿದ್ದಾರೆ.
ಈ ಹಿಂದೆ ಒಂದೆರಡು ಬಾರಿ ಈ ರಸ್ತೆಗೆ ಕೇವಲ ತೇಪೆ ಹಾಕುವ ಕೆಲಸವನ್ನು ಮಾಡಿದ್ದರೂ ಯಾವುದೇ ಪ್ರಯೋಜವಾಗಿಲ್ಲ. ಇದೀಗ ರಸ್ತೆ ತೀರ ಹಾಳಾಗಿದ್ದು, ಎತ್ತ ನೋಡಿದರೂ ಗುಂಡಿಗಳ ದರ್ಶನವಾಗುತ್ತಿದೆ. ಹೆಜ್ಜೆ ಹೆಜ್ಜಗೂ ಅಪಾಯಕ್ಕೆ ಆಹ್ವಾನ ನೀಡುವ ಈ ಹದಗೆಟ್ಟ ರಸ್ತೆಗಳನ್ನು ಕೂಡಲೇ ರಿಪೇರಿ ಮಾಡಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.