ಮೈಸೂರ್ ಮೇಲ್ ವರದಿ ಫಲಶ್ರುತಿ : ಆತಂಕಕ್ಕೆ ಕಾರಣವಾಗಿದ್ದ ಬೃಹತ್ ಗಾತ್ರದ ಮರ ತೆರವು
ಅಕ್ಟೋಬರ್ 18, 2022
ನಿಟ್ಟುಸಿರು ಬಿಟ್ಟ ಹನೂರು ಜನತೆ
ವರದಿ-ಶಾರುಕ್ ಖಾನ್, ಹನೂರು
ಹನೂರು : ಸತತವಾಗಿ ಸುರಿಯುತ್ತಿದ್ದ ಭಾರಿ ಮಳೆಯಿಂದಾಗಿ ಬೀಳುವ ಹಂತದಲ್ಲಿದ್ದ ಬೃಹತ್ ಗಾತ್ರದ ಹಳೆಯ ಮರವನ್ನು ಅರಣ್ಯಾಧಿಕಾರಿಗಳು ಇಂದು ಬೆಳಿಗ್ಗೆ ತೆರವುಗೊಳಿಸಿದ್ದು, ಸಾರ್ವಜನಿಕರು ನಿಟ್ಟುಸಿರು ಬಿಟ್ಟಿದ್ದಾರೆ. ಪಟ್ಟಣದ ಬಂಡಳ್ಳಿ ಮುಖ್ಯ ರಸ್ತೆಯಲ್ಲಿರುವ ದೊಡ್ಡ ಗಾತ್ರದ ಮರವೊಂದು ಭಾರಿ ಮಳೆಗೆ ತತ್ತರಿಸಿ ಯಾವುದೇ ಸಮಯದಲ್ಲಿ ಬೀಳುವ ಹಂತದಲ್ಲಿತ್ತು. ಈ ರಸ್ತೆಯಲ್ಲಿ ದಿನನಿತ್ಯ ಸಾವಿರಾರು ಜನರು ಓಡಾಡುತ್ತಿದ್ದರಿಂದ ಒಂದು ವೇಳೆ ಜನರ ಮೇಲೆ ಮರ ಬಿದ್ದರೆ ಭಾರಿ ಪ್ರಾಣಾಪಾಯ ಉಂಟಾಗುವ ಸಾಧ್ಯತೆಯೂ ಇತ್ತು.
ಮರ ತೆರವು ಮ ಆಡುವಂತೆ ಸಾರ್ವಜನಿಕರು ಅರಣ್ಯ ಇಲಾಖೆಗೆ ಮತ್ತು ಪುರಸಭೆಗೆ ಅರ್ಜಿ ಕೊಟ್ಟರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಈ ವಿಚಾರವಾಗಿ ಮೈಸೂರ್ ಮೇಲ್ ಸೋಮವಾರ ರಾತ್ರಿ ವಿಸ್ತøತ ವರದಿ ಪ್ರಕಟಿಸಿ ಸಾರ್ವಜನಿಕರು ಮತ್ತು ಅಧಿಕಾರಿಗಳ ಗಮನ ಸೆಳೆದಿತ್ತು. ವರದಿಯಿಂದ ಎಚ್ಚೆತ್ತ ಅರಣ್ಯಾಧಿಕಾರಿಗಳು ಮಂಗಳವಾರ ಬೆಳ್ಳಂಬೆಳಿಗ್ಗೆ ಜೆಸಿಬಿ ಮೂಲಕ ಬೃಹತ್ ಮರವನ್ನು ತೆರವುಗೊಳಿಸುವ ಕಾರ್ಯಾಚರಣೆ ನಡೆಸಿದರು.
ದಿನನಿತ್ಯ ಲಕ್ಷಾಂತರ ಗ್ಯಾಲನ್ ಆಮ್ಲಜನಕ ಉತ್ಪತ್ತಿ ಮಾಡುತ್ತಾ, ಮನುಷ್ಯರು ಮತ್ತು ಪಕ್ಷಿಗಳಿಗೆ ಆಸರೆಯಾಗಿದ್ದ ಬೃಹತ್ ಗಾತ್ರದ ಮರ ತೆರವು ಮೈಸೂರ್ ಮೇಲ್ ವೆಬ್ ನ್ಯೂಸ್ ಪತ್ರಿಕಾ ಬಳಗಕ್ಕೆ ಬೇಸರ ತಂದಿದೆಯಾದರೂ, ಜನರ ಪ್ರಾಣ ರಕ್ಷಣೆಗೆ ನಮ್ಮ ಸುದ್ದಿ ಅನಿವಾರ್ಯವಾಗಿತ್ತು. ಮರ ತೆರವಿಗೆ ವಿಷಾಧಿಸುತ್ತಾ ಅರಣ್ಯ ಇಲಾಖೆಯ ಸಸಿ ನೆಡುವ ಕಾರ್ಯಕ್ರಮಕ್ಕೆ ನಮ್ಮ ಬಳಗ ಕೈಜೋಡಿಸುತ್ತದೆ ಎಂಬ ಭರವಸೆ ನೀಡುತ್ತೇವೆ.