ಮೂವರ ಬಂಧನ, 1.20 ಲಕ್ಷ ಮೌಲ್ಯದ 24 ಗ್ರಾಂ ಡ್ರಗ್ಸ್, ಬೈಕ್, ಲ್ಯಾಪ್‍ಟ್ಯಾಪ್, ಮೊಬೈಲ್ ವಶ
ಮೈಸೂರು : ನಗರದಲ್ಲಿ ಇತ್ತೀಚೆಗೆ ಮಾದಕ ವಸ್ತುಗಳ ಮಾರಾಟ ಹೆಚ್ಚಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿ ಮೂವರನ್ನು ಬಂಧಿಸಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಸಿಸಿಬಿ ಹೆಚ್ ಮತ್ತು ಬಿ ವಿಭಾಗ ಹಾಗೂ ಸೆನ್ ಕ್ರೈಂ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಗರದ ಬೋಗಾದಿ ಎಸ್‍ಬಿಎಂ ಬಡಾವಣೆ, “ಎ” ಬ್ಲಾಕ್, ಹರಿ ವಿದ್ಯಾಲಯ ಶಾಲೆ ಬಳಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಅವರಿಂದ 1.20 ಲಕ್ಷ ಮೌಲ್ಯದ 24 ಗ್ರಾಂ ಮಾದಕ ವಸ್ತು ಎಂಡಿಎಂಎ, ತೂಕ ಮಾಡುವ ಯಂತ್ರ, 2 ದ್ವಿ ಚಕ್ರವಾಹನ, 2 ಲ್ಯಾಪ್‍ಟಾಪ್ ಹಾಗೂ 5 ಮೊಬೈಲ್ ಪೋನ್‍ಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಂಧಿತರು ಮೈಸೂರಿನ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳಾಗಿದ್ದಾರೆ.
ಬೆಂಗಳೂರಿನಲ್ಲಿ ವಾಸವಿರುವ ಕೇರಳ ಮೂಲದ ವ್ಯಕ್ತಿಗಳಿಂದ ಕಡಿಮೆ ಬೆಲೆಗೆ ಮಾದಕವಸ್ತು ಖರೀದಿಸಿ ಮೈಸೂರು ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎನ್ನಲಾಗಿದೆ.
ಡಿಸಿಪಿ ಎಂ.ಎಸ್, ಗೀತ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಸಿ.ಕೆ.ಅಶ್ವತ್ಥನಾರಾಯಣ ನೇತೃತ್ವದಲ್ಲಿ ಹೆಚ್ ಮತ್ತು ಬಿ ಇನ್ಸ್‍ಪೆಕ್ಟರ್ ಜಿ.ಶೇಖರ್, ಸೆನ್ ಕ್ರೈಂ ಇನ್ಸ್‍ಪೆಕ್ಟರ್ ಜಯಕುಮಾರ್, ಸಿಬ್ಬಂದಿಗಳಾದ ಸಲೀಂಖಾನ್, ಲಕ್ಷ್ಮೀಕಾಂತ, ಪ್ರಕಾಶ್ ದಾಳಿಯಲ್ಲಿ ಭಾಗವಹಿಸಿದ್ದರು.
ದಾಳಿ ಕಾರ್ಯವನ್ನು ಪೊಲೀಸ್ ಆಯುಕ್ತರಾದ ಡಾ. ಚಂದ್ರಗುಪ್ತ ಪ್ರಶಂಸಿದ್ದಾರೆ.
0 ಕಾಮೆಂಟ್‌ಗಳು