ಹನೂರು : ಸಿಡಿಲಿಗೆ ಹಸು ಬಲಿ, ಬೆಳೆ ನಾಶ, ಮನೆಯ ಗೋಡೆ ಕುಸಿತ

ಗುಡ್ಡ ಕುಸಿತ, ರಸ್ತೆ ಸಂಚಾರ ನಿರ್ಬಂಧ

ವರದಿ-ಶಾರುಕ್ ಖಾನ್, ಹನೂರು

ಹನೂರು : ತಾಲ್ಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ  ಭಾರಿ ಮಳೆಗೆ ಜನ ಜೀವನ ತತ್ತರಿಸಿದ್ದು, ಸಿಡಿಲು ಬಡಿತಕ್ಕೆ  ಒಂದು ಹಸು ಬಲಿಯಾಗಿರುವ ಘಟನೆ ತಾಲ್ಲೂಕಿನ ಕಾಂಚಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪಚ್ಚೇಗೌಡನ ಮಗ ಮಾದೇವ ಎಂಬುವರಿಗೆ ಸೇರಿದ ಹಸು ಸಿಡಿಲಿಗೆ ಬಲಿಯಾಗಿದೆ. ಸ್ಥಳಕ್ಕೆ ಪೊಲೀಸರು, ಪಶುವೈದ್ಯಾಧಿಕಾರಿಗಳು ಭೇಟಿ ನೀಡಿ ಮರಣೋತ್ತರ ಪರೀಕ್ಷೆ ನಡೆಸಿದರು


ಬೆಳೆ ನಾಶ ; ಸತತ ಮಳೆಯಿಂದ ತಾಲ್ಲೂಕಿನ ಹೊಸದೊಡ್ಡಿ ಗ್ರಾಮದ ನಿಂಗಮ್ಮ ಎಂಬವರ 2 ಎಕರೆ ಜಮೀನಿನಲ್ಲಿ ಬೆಳೆದಿದ್ದ ಆಲೂಗೆಡ್ಡೆ ಮತ್ತು ಒಂದೂವರೆ ಎಕರೆ ಜೋಳ ನಾಶವಾಗಿದ್ದು, ಘಟನೆಯಿಂದ 3,5 ಲಕ್ಷ ರೂ. ನಷ್ಟವಾಗಿದೆ ಎಂದು ನೊಂದ ಮಹಿಳೆ ಗೋಳಾಡುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಮನೆಗೆ ಬಡಿದ ಸಿಡಿಲು : ಭಾರಿ ಗುಡುಗು ಸಹಿತ ಬಿದ್ದ ಮಳೆಯ ನಡುವೆ ಸಿಡಿಲು ಬಡಿದು ಮನೆ ಕುಸಿದಿರುವ ಘಟನೆ ಹೊಸಪೋಡು ಗ್ರಾಮದಲ್ಲಿ ನಡೆದಿದೆ. ಈ ವೇಳೆ ಇಬ್ಬರು ಗಾಯಗೊಂಡಿದ್ದಾರೆ.  
ಸೋಲಿಗ ಸಮಾಜದ ಮಹದೇವ್ ಎಂಬವರ ಮನೆ ಕುಸಿದಿದ್ದು, ಮಹದೇವ್ ಮತ್ತು ಇನ್ನೊಬ್ಬರಿಗೆ ಗಾಯಗಳಾಗಿವೆ. 


ಭಾರಿ ಮಳೆಯ ಕಾರಣ ವಿವಿಧ ಕಡೆ ಗುಡ್ಡಗಳು ಕುಸಿದು ರಸ್ತೆ ಸಂಚಾರಕ್ಕೆ ಅಡಚಣೆಯಾದ ಕಾರಣ ಗರಿಕೆಕಂಡಿ ಚೆಕ್ ಪೋಸ್ಟ್‍ನಿಂದ ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ನಾಲ್ಕು ದಿನಗಳ ಕಾಲ ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿದೆ.