ಶಿಕ್ಷಣದ ಗುಣಮಟ್ಟ ಕುಸಿಯಲು ಸರ್ಕಾರದ ನೀತಿಗಳೇ ಕಾರಣ : ಚಂದ್ರಕಲಾ ಟೀಕೆ

5 ಮತ್ತು 8 ನೇ ತರಗತಿಗೆ ಪಬ್ಲಿಕ್ ಪರೀಕ್ಷೆ ಪ್ರಸ್ತಾವನೆ ಕೈಬಿಡುವಂತೆ ಎಐಡಿಎಸ್‍ಓ ಒತ್ತಾಯ


 ಮೈಸೂರು : ಶಿಕ್ಷಣ ಗುಣಮಟ್ಟವನ್ನು ಕಾಪಾಡುವ ಉದ್ದೇಶದಿಂದ ರಾಜ್ಯ ಸರ್ಕಾರ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದಾಗಿ ಹೇಳಿದ್ದು, ಆ ವಯೋಮಿತಿಯ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ವಿದ್ಯಾರ್ಥಿಗಳ ಮಾನಸಿಕ ಒತ್ತಡವನ್ನು ಹೆಚ್ಚಿಸುವ ಅಪಾಉ ಇರುವುದರಿಂದ ಕೂಡಲೇ ಈ ಪ್ರಸ್ತಾವನೆಯನ್ನು ಕೈಬಿಡಬೇಕೆಂದು ಎಐಡಿಎಸ್‍ಓ ಜಿಲ್ಲಾ ಕಾರ್ಯದರ್ಶಿ ಚಂದ್ರಕಲಾ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿಕ್ಷಣದ ಗುಣಮಟ್ಟ ಕುಸಿಯಲು  ಸರ್ಕಾರದ ನೀತಿಗಳೇ ಕಾರಣ. ಈಗಾಗಲೇ ಪಾಸ್ ಫೇಲ್ ಪದ್ದತಿಯನ್ನು ಕೈಬಿಟ್ಟು ಕಡ್ಡಾಯ ಉತ್ತೀರ್ಣ ನೀತಿ (ನೋ ಡಿಟೆನ್ಷನ್ ಪಾಲಿಸಿ)ಯನ್ನು  ಜಾರಿಗೊಳಿಸಿರುವುದು ಶಿಕ್ಷಣದ ಗುಣಮಟ್ಟವನ್ನು ಹಾಳುಗೆಡವಿದೆ. ಈ ಅವೈಜ್ಞಾನಿಕ ನೀತಿಯು ಜಾರಿಯಾದ ದಿನದಿಂದಲೂ ಎಐಡಿಎಸ್ಓ ಇದರ ವಿರುದ್ಧ ಧ್ವನಿ ಎತ್ತಿದೆ. ಕಾಲದ ಗತಿಯಲ್ಲಿ ಸಾಬೀತಾಗಿರುವ ಪಾಸ್ ಫೇಲ್ ಪದ್ದತಿಯನ್ನು ಜಾರಿಗೊಳಿಸುವುದನ್ನು ಬಿಟ್ಟು ಸರ್ಕಾರ ಶಿಕ್ಷಕರ ಮೇಲೆ ಗೂಬೆ ಕೂರಿಸುತ್ತಿದೆ. ಶಾಲೆಗಳಲ್ಲಿ ಸಮರ್ಪಕ ಸಂಖ್ಯೆಯಲ್ಲಿ ಶಿಕ್ಷಕರ ನೇಮಕಾತಿಯಾಗಿಲ್ಲ, ಸರಿಯಾದ ಕಟ್ಟಡಗಳಿಲ್ಲ, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಕನಿಷ್ಠ ಸೌಲಭ್ಯಗಳು ಕೂಡ ಇಲ್ಲ. ರಾಜ್ಯದಲ್ಲಿ 4500 ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಶಿಕ್ಷಕರೇ ಇಲ್ಲದಿರುವ ಶಾಲೆಗಳು ಕೂಡ ಈ ರಾಜ್ಯದಲ್ಲಿವೆ. ಜೊತೆಗೆ, ಇರುವ ಕೆಲವು ಶಿಕ್ಷಕರಿಗೆ ಪಾಠವನ್ನು ಹೊರತುಪಡಿಸಿ ಹಲವು ಬೋಧಕೇತರ ಕೆಲಸಗಳನ್ನು ಸರ್ಕಾರವೇ ವಹಿಸುತ್ತದೆ. ಸಮರ್ಪಕ ಸೌಲಭ್ಯಗಳನ್ನು ಒದಗಿಸಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣಕ್ಕೆ ಪೂರಕ ವಾತಾವರಣವನ್ನು ಸೃಷ್ಟಿಸುವ ತನ್ನ ಕನಿಷ್ಠ ಜವಾಬ್ದಾರಿಯನ್ನು ನಿಭಾಯಿಸದೆ ಸರ್ಕಾರವು ಪಬ್ಲಿಕ್ ಪರೀಕ್ಷೆ ಕುರಿತು ಮಾತನಾಡುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಈಗಾಗಲೇ ಸರ್ಕಾರವು ಹೊಸ ಶಿಕ್ಷಣ ನೀತಿಯನ್ನು ರಾಜ್ಯದಲ್ಲಿ ಹೇರುತ್ತಿರುವುದರ ವಿರುದ್ಧ ವ್ಯಾಪಕವಾಗಿ ವಿದ್ಯಾರ್ಥಿಗಳು ಶಿಕ್ಷಕರು ಮತ್ತು ತಜ್ಞರಿಂದ ವಿರೋಧ ವ್ಯಕ್ತವಾಗುತ್ತಿದೆ. ಈಗ 5 ಮತ್ತು 8ನೇ ತರಗತಿಗೆ ಪಬ್ಲಿಕ್ ಪರೀಕ್ಷೆಗಳನ್ನು ನಡೆಸುವುದು ಅತ್ಯಂತ ಸ್ಪಷ್ಟವಾಗಿ ಎನ್ಇಪಿ-2020ರ ಹೇರಿಕೆಯಾಗಿದೆ. ಈ ತರದ ಪರೀಕ್ಷೆಗಳು ಕೋಚಿಂಗ್ ಲಾಬಿಗಳಿಗೆ ಮಣೆ ಹಾಕುವುದμÉ್ಟೀ ಅಲ್ಲದೆ ಶಿಕ್ಷಣವನ್ನು ಇನ್ನಷ್ಟು ದುಬಾರಿಗೊಳಿಸುತ್ತದೆ ಎಂಬ ಆತಂಕ ವ್ಯಕ್ತಪಡಿಸಿದರ ಅವರು, ಸರ್ಕಾರವು ಈ ಕೂಡಲೇ ಪಬ್ಲಿಕ್ ಪರೀಕ್ಷೆಯ ಪ್ರಸ್ತಾವನೆಯನ್ನು ಕೈಬಿಡಬೇಕು. ಮತ್ತು ಶಿಕ್ಷಣದ ಗುಣಮಟ್ಟವನ್ನು ಖಾತ್ರಿಪಡಿಸಲು ಪಾಸ್ ಫೇಲ್ ಪದ್ದತಿಯನ್ನು ಜಾರಿಗೊಳಿಸಬೇಕು ಹಾಗೂ ಶಿಕ್ಷಕರ ನೇಮಕಾತಿ, ಶಾಲಾ ಕಟ್ಟಡ ಸೇರಿದಂತೆ ಇತರ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿ ಸಾರ್ವಜನಿಕ ಶಿಕ್ಷಣ ಪದ್ಧತಿಯನ್ನು ಬಲಪಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು