ರೈತರ ಸಮಸ್ಯೆಗಳಿಗೆ ಸರ್ಕಾರದ ಸ್ಪಂದನೆ ಇಲ್ಲ ಎಂಬ ಆರೋಪ : ಮೈಸೂರಿಗೆ ಸಂಪರ್ಕ ಕಲ್ಪಿಸುವ ಎಂಟು ರಸ್ತೆಗಳನ್ನು ಬಂದ್ ಮಾಡುವುದಾಗಿ ರೈತ ಸಂಘ ಘೋಷಣೆ
ವರದಿ-ನಜೀರ್ ಅಹಮದ್, ಮೈಸೂರು
ಮೈಸೂರು : ಒಂದು ಟನ್ ಕಬ್ಬಿಗೆ 4,500 ರೂ. ನಿಗದಿ ಮಾಡುವುದು, ಎಸ್‍ಎಪಿ ಘೋಷಣೆ, ಶಾಶ್ವತ ಗಣಿಗಾರಿಕೆ ನಿಷೇಧ, ವಿದ್ಯುತ್ ತಿದ್ದುಪಡಿ ಕಾಯ್ದೆ ಹಿಂಪಡೆಯುವುದು ಸೇರಿದಂತೆ ತಮ್ಮ 18 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ನಾಳೆ ಅ.5 ರಂದು ಮೈಸೂರಿಗೆ ಸಂಪರ್ಕ ಕಲ್ಪಿಸುವ 8 ರಸ್ತೆಗಳನ್ನು ಬಂದ್ ಮಾಡುವುದಾಗಿ ರೈತಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಘೊಷಿಸಿದ್ದಾರೆ.
ಮಂಡ್ಯ ವಿಸಿ ಫಾರಂ, ಮದ್ದೂರು ಅಡಿಗಾಸ್ ಹೋಟೆಲ್, ಮಳವಳ್ಳಿಯ ಅಂಚೆದೊಡ್ಡಿ ಗೇಟ್, ಟಿ.ನರಸೀಪುರದ ಎಡತೊರೆ, ಮೈಸೂರಿನ ಇಲವಾಲ, ನಂಜನಗೂಡು ಕಬಿನಿ ಸೇತುವೆ, ಶ್ರೀರಂಗಪಟ್ಟಣದ ಕಿರಂಗೂರು ಸರ್ಕಲ್, ಮತ್ತು ಕೆ.ಆರ್.ಪೇಟೆ ಸರ್ಕಲ್‍ನಲ್ಲಿ ರಸ್ತೆ ತಡೆ ನಡೆಸಲಾಗುವುದು ಎಂದು ರೈತಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ನಿನ್ನೆಯಷ್ಟೇ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ರೈತ ಮುಖಂಡರ ಜತೆ ಮಾತನಾಡಿ, ಅ.4 ರಂದು ಮುಖ್ಯಮಂತ್ರಿಗಳು ಮೈಸೂರಿಗೆ ಭೇಟಿ ನೀಡಲಿದ್ದು, ಅವರೊಂದಿಗೆ ಚರ್ಚಿಸಿ ಸಮಸ್ಯೆ ಬಗೆ ಹರಿಸುವುದಾಗಿ ಭರವಸೆ ನೀಡಿದ್ದರು. ಆದರೆ, ಇಲ್ಲಿಯ ತನಕ ನಮಗೆ ಮಾತುಕತೆಗೆ ಕರೆದಿಲ್ಲ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುವ ಕಾರ್ಯಕ್ರಮದಂದೂ ಸಹ ರೈತರನ್ನು ಸಿಎಂ ನಿವಾಸಕ್ಕೆ ಬಿಡದೆ ಪೊಲೀಸರು ಸಿಕ್ಕ ಸಿಕ್ಕಲ್ಲೆಲ್ಲಾ ರೈತರನ್ನು ಬಂಧಿಸಿದ್ದರು. ನಂತರ ರೈತರಿಗೆ ಸಿಹಿ ಸುದ್ದಿ ಕೊಡುವ ಬಗ್ಗೆ ವಾಗ್ದಾನವನ್ನೂ ಮುಖ್ಯಮಂತ್ರಿಗಳು ಮಾಡಿದ್ದು, ಅದನ್ನೂ ಸಹ ಈಡೇರಿಸಿಲ್ಲ. ರೈತರ ಸಮಸ್ಯೆಗಳಿಗೆ ಸ್ಪಂದಿಸದ ಮುಖ್ಯಮಂತ್ರಿಗಳ ನಡೆಯನ್ನು ಖಂಡಿಸಿ ರಸ್ತೆ ತಡೆ ಮಾಡುತ್ತಿರುವುದಾಗಿ ರೈತಸಂಘ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
