ನಾಳೆಯಿಂದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ದಿ ಬಿಗ್ ಟೆಕ್ ಶೋ 2ನೇ ಆವೃತ್ತಿ ಆರಂಭ
ಮೈಸೂರು : ಪ್ರಸಕ್ತ ಮೈಸೂರಿನಲ್ಲಿ ಎಲೆಕ್ಟ್ರಾನಿಕ್ ಉದ್ಯಮ ಅತ್ಯುತ್ತಮವಾಗಿ ನಡೆಯುತ್ತಿದ್ದು, ವಾರ್ಷಿಕ 5ಸಾವಿರ ಕೋಟಿ ವಹಿವಾಟು ನಡೆಯುತ್ತಿದೆ. 2026ಕ್ಕೆ ಇದು 10 ಸಾವಿರ ಕೋಟಿ ದಾಟಲಿದೆ ಎಂದು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಿಇಒ ಸಂಜೀವ್ ಗುಪ್ತಾ ತಿಳಿಸಿದರು.
ಮೈಸೂರಿನ ಸದರನ್ ಸ್ಟಾರ್ ಹೊಟೇಲ್‍ನಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮವಾದ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ವತಿಯಿಂದ ನಾಳೆಯಿಂದ ಎರಡು ದಿನಗಳ ಕಾಲ ದಿ ಬಿಗ್ ಟೆಕ್ ಶೋ 2ನೇ ಆವೃತ್ತಿ ಆರಂಭವಾಗಲಿದೆ.
ನಗರದ ರ್ಯಾಡಿಸನ್ ಬ್ಲೂ ಹೋಟೆಲ್‍ನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕೇಂದ್ರ ವಿದ್ಯುನ್ಮಾನ ಮತ್ತು ತಂತ್ರಜ್ಞಾನ ರಾಜ್ಯ ಸಚಿವ ಹಾಗೂ ಕೇಂದ್ರ ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮಶೀಲತೆ ರಾಜ್ಯ ಸಚಿವರೂ ಆದ ರಾಜೀವ್ ಚಂದ್ರಶೇಖರ್ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.
ಎಲೆಕ್ಟ್ರಾನಿಕ್ ಉದ್ಯಮಕ್ಕೆ ಮೈಸೂರು ಪ್ರಶಸ್ತವಾದ ಸ್ಥಳವಾಗಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ಉದ್ದಿಮೆಗಳು ಹೆಚ್ಚಾಗಿ ಲಕ್ಷಾಂತರ ಉದ್ಯೋಗ ಸೃಷ್ಟಿಯಾಗಲಿದೆ. ಕೆಡಿಇಎಂ ಮತ್ತು ಟಿಐಇ ಹೂಡಿಕೆದಾರರಿಂದ ಉದ್ಯಮಿಗಳು ಹಾಗೂ ಹೂಡಿಕೆದಾರರಿಗೆ ತಮ್ಮ ಉತ್ಪನ್ನಗಳು ಮತ್ತು ಸೇವೆಗಳನ್ನು ಪ್ರದರ್ಶಿಸಲು ನೆರವು ನೀಡುವ ಉದ್ದೇಶದಿಂದ ಈ ಕಾರ್ಯಕ್ರಮ ರೂಪಿಸಲಾಗಿದೆ. ಪ್ಯಾನಲ್ ಚರ್ಚೆಗಳು, ವುಮೆನ್ @ ವರ್ಕ್ ಕಾನ್ ಕ್ಲೇವ್, ಮೈಸೂರು ಬ್ಲೂ, ಸಿಇಒ ರೌಂಡ್ ಟೇಬಲ್ ಮೀಟಿಂಗ್, ಕೀ ನೋಟ್, ಸಮಕಾಲೀನ ವಿಷಯಗಳ ಬಗ್ಗೆ ಫೈರ್ ಸೈಡ್ ಚಾಟ್‍ಗಳು ನಡೆಯಲಿವೆ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರದ ಎಲೆಕ್ಟ್ರಾನಿಕ್ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನ, ಉನ್ನತ ಶಿಕ್ಷಣ, ಕೌಶಲ್ಯ ಅಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಭಾಗವಹಿಸಲಿದ್ದಾರೆ. ಜತೆಗೆ 500ಕ್ಕೂ ಹೆಚ್ಚು ಪ್ರತಿನಿಧಿಗಳು, 2ಸಾವಿರಕ್ಕೂ ಹೆಚ್ಚು ವಾಕಥಾನ್ ಸ್ವರ್ಧಿಗಳು, 50ಕ್ಕೂ ಅಧಿಕ ಸ್ಟಾರ್ಟ್ ಅಪ್ ಶೋಕೇಸ್, 150ಕ್ಕೂ ಅಧಿಕ ಸಿಎಕ್ಸ್‍ಓಗಳು 25ಕ್ಕೂ ಅಧಿಕ ಹೂಡಿಕೆದಾರರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ವಿವಿಧ ಉದ್ದಿಮೆದಾರರಾದ ಸುಧನ್ವಾ, ಕ್ಯಾಪ್ಟನ್ ನಾಯ್ಡು, ಮಹೇಶ್ ರಾವ್, ರವಿ ಇದ್ದರು.