ಪ್ರತಾಪ್ ಸಿಂಹರಿಂದ 41 ಲಕ್ಷ ರೂ. ಸಂಸದರ ನಿಧಿ ದುರುಪಯೋಗ : ಎಂ.ಲಕ್ಷ್ಮಣ್ ಆರೋಪ, ನಾಳೆ ಎಂಪಿ ಮತ್ತು ಜಿಲ್ಲಾಧಿಕಾರಿ ವಿರುದ್ಧ ದೂರು

ಶಾಲಾ ಮಕ್ಕಳಿಗೆ ಶುಲ್ಕ ವಿಧಿಸಿ 40 ಪರ್ಸೆಂಟ್ ಹೊಡೆಯುವ ಹುನ್ನಾರ ಮಾಡಲಾಗಿತ್ತು  

 ಮೈಸೂರು : ಸಂಸದ ಪ್ರತಾಪ್ ಸಿಂಹ ಕಾನೂನು ಮೀರಿ 41 ಲಕ್ಷ ರೂ. ಸಂಸದರ ನಿಧಿಯನ್ನು ದುರುಪಯೋಗ ಮಾಡಿದ್ದಾರೆಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಪ್ರತಾಪ್ ಸಿಂಹ ಮೈಸೂರು ಕೊಡಗು ಜಿಲ್ಲೆಯ ಸಂಸದರು. ತಮ್ಮ ಎಂಪಿ ಲ್ಯಾಡ್ ಅನುದಾನವನ್ನು ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಖರ್ಚು ಮಾಡಬೇಕು. ಅದನ್ನು ಬಿಟ್ಟು ದಕ್ಷಿಣ ಕನ್ನಡ ಜಿಲ್ಲೆಯ ಕಿಕ್ಕಿಂಜೆ ಪಟ್ಟಣದ ಬೆಂದ್ರಲಾ ವೆಂಕಟಕೃಷ್ಣ ಈರ್ವತ್ರಾಯ ಮೆಮೋರಿಯಲ್ ಟ್ರಸ್ಟ್ ಗೆ ಆಂಬುಲೆನ್ಸ್ ಖರೀದಿಸಲು 18 ಲಕ್ಷ ರೂ. ನೀಡಿದ್ದಾರೆ. ಇದು ಕಾನೂನು ಬಾಹಿರ ಮೈಸೂರು ಕೊಡಗು ಕ್ಷೇತ್ರದ ವೀರರಾಜಪೇಟೆ, ಹುಣಸೂರು, ಪಿರಿಯಾಪಟ್ಟಣ, ಮಡಿಕೇರಿಯ ಬಹಳಷ್ಟು ಕಡೆಗಳಲ್ಲಿ ಆಂಬುಲೆನ್ಸ್ ಇಲ್ಲದೇ ಜನ ಒದ್ದಾಡುತ್ತಿದ್ದರೂ ಈ ಪ್ರದೇಶದ ಅಭಿವೃದ್ಧಿಯ ಹಣವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ನೀಡಿರುವುದು ಸರಿಯಲ್ಲ. ಪ್ರತಾಪ್ ಸಿಂಹ ತಮ್ಮ ಕ್ಷೇತ್ರದ ಜನರಿಗೆ ಮೋಸ ಮಾಡಿದ್ದಾರೆ ಎಂದರು. 
ವಾಸ್ತವದಲ್ಲಿ ಬೆಂದ್ರಲಾ ವೆಂಕಟಕೃಷ್ಣ ಈರ್ವತ್ರಾಯ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷರಾದ ಡಾ.ಮುರಳಿಕೃಷ್ಣ ಈರ್ವತ್ರಾಯ ಅವರು ಸಂಸದ ಪ್ರತಾಪ್ ಸಿಂಹ ಅವರ ಪತ್ನಿ ಅರ್ಪಿತಾ ಸಿಂಹ ಮೂಡಿಗೆರೆಯಲ್ಲಿ ನಡೆಸುತ್ತಿರುವ ಹೋಯ್ಸಳ ಕ್ಲೀನಿಕ್ ಸಂಸ್ಥೆಯ ಅಧ್ಯಕ್ಷರೂ ಸಹ ಆಗಿದ್ದಾರೆ. ಅರ್ಪಿತಾ ಸಿಂಹ ಈ ಸಂಸ್ಥೆಯ ನಿರ್ದೇಶಕರೂ ಆಗಿದ್ದು, ಇವರೆಲ್ಲರೂ ಸೇರಿ ಸಂಸದರ ನಿಧಿಯನ್ನು ಕಾನೂನು ಬಾಹಿರವಾಗಿ ದುರುಪಯೋಗ ಮಾಡಿಕೊಂಡಿದ್ದು, ನಾಳೆ ಪ್ರತಾಪ್ ಸಿಂಹ ಮತ್ತು ಜಿಲ್ಲಾಧಿಕಾರಿಗಳ ವಿರುದ್ಧ ದೂರು ನೀಡಲಾಗುವುದು ಎಂದರು.
ಸಂಸದರ ಪ್ರದೇಶಾಭಿವೃದ್ಧಿ ನಿಧಿಯನ್ನು ತಮ್ಮ ವ್ಯಾಪ್ತಿಯೊಳಗೆ ಖರ್ಚು ಮಾಡಬೇಕು. ವಿಶೇಷ ಸಂದರ್ಭದಲ್ಲಿ ವ್ಯಾಪ್ತಿ ಮೀರಿ ಖರ್ಚು ಮಾಡಲು ಅವಕಾಶವಿದ್ದರೂ ಎರಡೂ ಸಂಸದರ ಒಪ್ಪಿಗೆ ಬೇಕು. ಆದರೆ, ಯಾವುದೇ ಕಾರಣಕ್ಕೂ ಟ್ರಸ್ಟ್, ಸೊಸೈಟಿ, ಕೋ ಆಪರೇಟೀವ್ ಸೊಸೈಟಿಗೆ ಎಂಪಿ ಲ್ಯಾಡ್ ಅನುದಾನ ನೀಡುವಂತಿಲ್ಲ. ಸಂಸದರು ನಿಯಮ ಮೀತಿ ತಮಗೆ ಬೇಕಾದವರಿಗೆ ಜನರ ತೆರಿಗೆ ಹಣವನ್ನು ನೀಡಿ ನಿಧಿ ದುರುಪಯೋಗ ಮಾಡಿಕೊಂಡಿದ್ದಾರೆ. ಇದೇ ರೀತಿ ಮೈಸೂರಿನಲ್ಲೂ ಎಂ.ಗೋವಿಂದ ಶೆಣೈ ಚಾರಿಟಬಲ್ ಟ್ರಸ್ಟ್ ಅವರಿಗೆ 23 ಲಕ್ಷ ರೂ. ಎಂಪಿ ಲ್ಯಾಡ್ ಹಣವನ್ನು ನೀಡಿದ್ದಾರೆ. ಇದಕ್ಕೆ ಜಿಲ್ಲಾಧಿಕಾರಿಯೂ ಸಾಥ್ ನೀಡಿದ್ದು, ಇಬ್ಬರ ವಿರುದ್ಧ ಕೇಂದ್ರ ಸರ್ಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ ಒತ್ತಾಯಿಸಿದರು.

ಶಿಕ್ಷಣ ಮಂತ್ರಿ 240 ಕೋಟಿ ಹೊಡೆಯುವ ಹುನ್ನಾರ :

ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ವಿಧ್ಯಾರ್ಥಿಗಳ ಪೋಷಕರಿಂದ ಮಾಸಿಕ 100 ರೂ. ಸಂಗ್ರಹ ಮಾಡುವ ಮೂಲಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ 240 ಕೋಟಿ ರೂ. ಕಬಳಿಸುವ ಹುನ್ನಾರ ಮಾಡಿದ್ದರು ಎಂದು ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಆರೋಪಿಸಿದರು.
ರಾಜ್ಯದಲ್ಲಿನ ಒಟ್ಟು 44615 ಸರ್ಕಾರಿ ಪ್ರಾಥಮಿಕ ಶಾಲೆಗಳು ಮತ್ತು 5200 ಪ್ರೌಢಶಾಲೆಗಳಿಂದ ಒಟ್ಟು 50 ಲಕ್ಷ ವಿಧ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇವರಿಂದ ತಿಂಗಳಿಗೆ 100 ರೂ. ಸಂಗ್ರಹ ಮಾಡಿದರೆ ವಾರ್ಷಿಕ 600 ಕೋಟಿ ಹಣ ಬರುತ್ತದೆ. ಇದರಲ್ಲಿ ಶಿಕ್ಷಣ ಸಚಿವರಾದ ಬಿ.ಸಿ.ನಾಗೇಶ್ 40 ಪರ್ಸೆಂಟ್ ಪಡೆದುಕೊಂಡು ಉಳಿದುದ್ದನ್ನು ಯಾರ್ಯಾರಿಗೆ ನೀಡಲು ಉಪಾಯ ಮಾಡಿದ್ದರೋ ಗೊತ್ತಿಲ್ಲ. ನಾಚಿಕೆಯಾಗಬೇಕು ಈ ಸರ್ಕಾರಕ್ಕೆ ಎಂದು ವ್ಯಂಗ್ಯವಾಡಿದರು.
ರಾಜ್ಯದಲ್ಲಿ ಕೋವಿಡ್ ನಂತರ ಸಾವಿರಾರು ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ನೂರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ಹಲವಾರು ಶೈಕ್ಷಣಿಕ ಅಭಿವೃದ್ಧಿ ಯೋಜನೆಗಳನ್ನು ಬಿಜೆಪಿ ಸರ್ಕಾರ ರದ್ದು ಮಾಡಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಕೆಳವರ್ಗದ ಜನರನ್ನು ಶಿಕ್ಷಣ ವಂಚಿತರನ್ನಾಗಿ ಮಾಡುವುದೇ ಬಿಜೆಪಿಯ ಮೂಲ ಉದ್ಧೇಶ ಎಂದು ಟೀಕಿಸಿದರು.

ಒಕ್ಕಲಿಗರ ಮೇಲಿನ ಹುಸಿ ಪ್ರೇಮ :

ಬಿಜೆಪಿಯವರಿಗೆ ಒಕ್ಕಲಿಗ ಜನಾಂಗದವರ ಮೇಲೆ ನಿಜವಾದ ಪ್ರೀತಿ ಇಲ್ಲ. ಒಕ್ಕಲಿಗರ ನಾಯಕ ಡಿ.ಕೆ.ಶಿವಕುಮಾರ್ ಅವರಿಗೆ ಕೊಡಬಾರದ ಕಿರುಕುಳ ನೀಡಿದ್ದಾರೆ. ಸದಾನಂದಗೌಡರನ್ನು ಯಾವುದೇ ಕಾರಣ ನೀಡದೆ ಮುಖ್ಯಮಂತ್ರಿ ಮತ್ತು ಕೇಂದ್ರ ಸಚಿವ ಸ್ಥಾನದಿಂದ ತೆಗೆದಿದ್ದಾರೆ. ಜತೆಗೆ ಸಿ.ಪಿ.ಯೋಗೇಶ್ವರ್ ಅವರನ್ನೂ ಕೂಡ ಮಂತ್ರಿ ಸ್ಥಾನದಿಂದ ತೆಗೆದು ಹಾಕಿರುವ ಇವರು ಈಗ ಕೆಂಪೇಗೌಡರ ಪ್ರತಿಮೆ ನಿಲ್ಲಿಸುವ ಮೂಲಕ ಒಕ್ಕಲಿಗರ ಮತ ಸೆಳೆಯಲು ಕಸರತ್ತು ನಡೆಸಿದ್ದಾರೆ ಎಂದರು.
ಮೊದಲು ಆ ಭಾಗದಲ್ಲಿ ಜಮೀನು ಕಳೆದುಕೊಂಡ ಒಕ್ಕಲಿಗರಿಗೆ ನ್ಯಾಯ ದೊರಕಿಸಿ. ಒಕ್ಕಲಿಗರ ಅಭಿವೃದ್ಧಿ ನಿಗಮ ಘೋಷಿಸಿ ಎಷ್ಟು ದಿನವಾಯ್ತು ಇನ್ನೂ ಕಚೇರಿಯನ್ನೇ ಮಾಡಿಲ್ಲ. ಸಚಿವರಾದ ಡಾ.ಅಶ್ವತ್ಥ ನಾರಾಯಣ ಮತ್ತು ಆರ್.ಅಶೋಕ್ ಅಲ್ಲಿರುವ ಒಕ್ಕಲಿಗರನ್ನೆಲ್ಲಾ ಒಕ್ಕಲೆಬ್ಬಿಸಿ ಕೊಟ್ಯಾಂತರ ಮೊತ್ತದ ಬೇನಾಮಿ ಆಸ್ತಿ ಮಾಡಿಕೊಂಡಿದ್ದಾರೆ. ಸರಿಯಾದ ತನಿಖೆ ನಡೆದರೆ ಒಂದೇ ದಿನದಲ್ಲಿ ಇವರೆಲ್ಲರೂ ಜೈಲಿಗೆ ಹೋಗುತ್ತಾರೆ ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ.ರಾಮು, ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ ಇದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು