ಸಾರ್ವಜನಿಕರ ತೀವ್ರ ವಿರೋಧ : ಸರ್ಕಾರಿ ಶಾಲೆಗಳ ನಿರ್ವಹಣೆಗೆ ಪೋಷಕರಿಂದ 100 ರೂ ದೇಣಿಗೆ ಸಂಗ್ರಹದ ಸುತ್ತೋಲೆ ವಾಪಸ್ ಪಡೆದ ಸರ್ಕಾರ
ಅಕ್ಟೋಬರ್ 22, 2022
ಬೆಂಗಳೂರು : ಸರ್ಕಾರಿ ಶಾಲೆಗಳ ಮೂಲಭೂತ ಸೌಲಭ್ಯಗಳನ್ನು ನಿರ್ವಹಿಸುವುದಕ್ಕಾಗಿ ಮಕ್ಕಳ ಪೋಷಕರಿಂದ ಮಾಸಿಕ 100 ರೂ ದೇಣಿಗೆ ಸಂಗ್ರಹಿಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧ ಬಂದ ಬೆನ್ನಲ್ಲೆ ಸರ್ಕಾರ ಆ ಸುತ್ತೋಲೆಯನ್ನು ವಾಪಸ್ ಪಡೆದಿದೆ. ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್‍ರವರು ಸುತ್ತೋಲೆ ವಾಪಸ್ ಪಡೆಯುವಂತೆ ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದು, ಈ ಬಗ್ಗೆ ಮತ್ತೊಂದು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಅಕ್ಟೋಬರ್ 19 ರಂದು ಸುತ್ತೋಲೆಯೊಂದನ್ನು ಹೊರಡಿಸಿ, ‘ನಮ್ಮ ಶಾಲೆ – ನನ್ನ ಕೊಡುಗೆ’ ಯೋಜನೆ ಘೋಷಿಸಿದ್ದರು. ಆ ಮೂಲಕ ಪೋಷಕರು ನೀಡುವ ದೇಣಿಗೆಯನ್ನು ಶಾಲೆ- ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯ, ವಿದ್ಯುತ್ ಬಿಲ್ ಪಾವತಿ, ಆಟದ ಮೈದಾನದ ಸುಧಾರಣೆ, ಗಣಕ ಯಂತ್ರಗಳ ರಿಪೇರಿ, ಬೋಧನೋಪಕರಣಗಳು, ಅಗತ್ಯವಾದ ಅತಿಥಿ ಶಿಕ್ಷಕರ ವೇತನಗಳು ಸೇರಿದಂತೆ ಮೊದಲ ಮತ್ತು ಎರಡನೇ ಆದ್ಯತೆಯಲ್ಲಿ ಪಟ್ಟಿ ಮಾಡಿದ ಸುಮಾರು 17 ಅಗತ್ಯಗಳಿಗಾಗಿ ಎಸ್‍ಡಿಎಂಸಿಗಳು ದೇಣಿಗೆ ಸಂಗ್ರಹಿಸಬೇಕೆಂದು ಈ ಮೊದಲು ಸರ್ಕಾರ ಸೂಚಿಸಿತ್ತು. ಈ ಯೋಜನೆಗೆ ಶಿಕ್ಷಣ ತಜ್ಞರು, ವಿದ್ಯಾರ್ಥಿ ಸಂಘಟನೆಗಳ ಮುಖಂಡರು, ವಿರೋಧ ಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಮಠಗಳಿಗೆ, ವಿವಾದಾತ್ಮಕ ಸ್ವಾಮೀಜಿಗಳಿಗೆ ನೂರಾರು ಕೋಟಿ ಹಣ ನೀಡುವ ಸರ್ಕಾರ ಬಡಮಕ್ಕಳ ಶಿಕ್ಷಣಕ್ಕೆ ಕೊಡಲು ಹಣವಿಲ್ಲವೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಶಾಲೆಗಳಲ್ಲಿ ಅಗತ್ಯವಿರುವ ಖರ್ಚು ವೆಚ್ಚಗಳಿಗಾಗಿ ಪೋಷಕರಿಂದ 100 ರೂ ದೇಣಿಗೆ ಸಂಗ್ರಹಿಸಲು ಎಸ್‍ಡಿಎಂಸಿಗಳಿಗೆ ಅನುಮತಿ ನೀಡಿ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ಅಥವಾ ನನ್ನ ಪಾತ್ರವಿಲ್ಲ ಎಂದು ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಶನಿವಾರ ಮೈಸೂರಿನಲ್ಲಿ ಹೇಳಿದ್ದರು. ಜತೆಗೆ ಈ ರೀತಿ ದೇಣಿಗೆ ಸಂಗ್ರಹಿಸಿಲು ಆರ್‍ಟಿಇ ಕಾಯ್ದೆಯಲ್ಲಿ ಅವಕಾಶವಿದೆ. ಎಸ್‍ಡಿಎಂಸಿಯವರು ಮನವಿ ಮಾಡಿದ್ದರು. ಈ ರೀತಿ ಸುತ್ತೋಲೆ ಹೊರಡಿಸುವುದಕ್ಕೆ ಅಧಿಕಾರಿಗಳಿಗೆ ಕಾನೂನಿನಲ್ಲಿ ಅವಕಾಶವಿದೆ. ಎಲ್ಲವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿಲ್ಲ ಎಂದು ಸಹ ಸಚಿವರು ಸಮರ್ಥಿಸಿಕೊಂಡಿದ್ದರು. ಸರ್ಕಾರದ ಈ ನಿರ್ಧಾರಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ವಿರೋಧ ವ್ಯಕ್ತವಾದ ಬೆನ್ನಲ್ಲೆ ಈ ಸುತ್ತೋಲೆಯನ್ನು ಸರ್ಕಾರ ವಾಪಸ್ ಪಡೆದಿದೆ ಎನ್ನಲಾಗಿದೆ.
0 ಕಾಮೆಂಟ್‌ಗಳು