ಮೈಸೂರು : ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ನಡೆಯುವ ವಿಶ್ವ ವಿಖ್ಯಾತ ಜಂಬೂ ಸವಾರಿಯಲ್ಲಿ ಪಾಲ್ಗೊಳ್ಳಲು ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ತಂಡದ ಮಾವುತರು ಮತ್ತು ಕಾವಾಡಿಗಳ ಕುಟುಂಬಕ್ಕೆ ಸಮಾಜ ಸೇವಕಿ ಶಶಿಕಲಾ ಸುರೇಂದ್ರ ಬಟ್ಟೆಗಳನ್ನು ವಿತರಿಸಿ, ಮಹಿಳೆಯರಿಗೆ ಅರಿಶಿನ ಕುಂಕುಮ ನೀಡಿದರು.
ಬಳಿಕ ಅವರು ಮಾತನಾಡಿ, ನಾಡಹಬ್ಬ ಮೈಸೂರು ದಸರಾ ಮೆರವಣಿಗೆಯಲ್ಲಿ ನಡೆಯುವ ಜಂಬೂಸವಾರಿಯನ್ನು ಯಶಸ್ವಿಗೊಳಿಸಲು ಕಾವಾಡಿಗಳು ಮತ್ತು ಮಾವುತರು ಕಳೆದ ಒಂದು ತಿಂಗಳಿನಿಂದ ತಮ್ಮ ಹಾಡಿಯನ್ನು ಬಿಟ್ಟು ಗಜಪಡೆಗಳ ತಾಲೀಮಿನಲ್ಲಿ ಭಾಗವಹಿಸಲು ಅರಮನೆಯಲ್ಲಿ ಬೀಡು ಬಿಟ್ಟಿದ್ದಾರೆ. ಸರ್ಕಾರ ಇವರಿಗೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿದೆಯಾದರೂ, ಸಂಘಸಂಸ್ಥೆಗಳು ಇವರನ್ನು ಆತ್ಮೀಯವಾಗಿ ನೋಡಿಕೊಳ್ಳುವುದು ಕರ್ತವ್ಯವಾಗಿದೆ.
ಈ ಕಾರಣದಿಂದ ನಾವು ಇಂದು ಮಾವುತರು ಮತ್ತು ಕಾವಾಡಿಗಳ ಕುಟುಂಬದವರಿಗೆ ಸೀರೆ, ರವಿಕೆ, ಹೂವು, ಅರಿಶಿಣ-ಕುಂಕುಮ ನೀಡುವ ಮೂಲಕ ಇವರೂ ನಮ್ಮವರೆಂದು ಸಮಾಜಕ್ಕೆ ಸಂದೇಶ ನೀಡಿದ್ದೇವೆ. ಜತೆಗೆ ಮಕ್ಕಳು ಟೆಂಟ್ ಶಾಲೆಯಲ್ಲಿ ಕಲಿಯುತ್ತಿದ್ದು, ಅಗತ್ಯ ನೋಟ್‍ಪುಸ್ತಕಗಳನ್ನೂ ಸಹಾ ವಿತರಿಸಿದ್ದೇವೆ ಎಂದರು. ಈ ಸಂದರ್ಭದಲ್ಲಿ ಮನೋವೈದ್ಯರಾದ ಡಾ.ರೇಖಾ, ಗಿರಿಜಾಂಬ ಇದ್ದರು.
0 ಕಾಮೆಂಟ್‌ಗಳು