ಜನ ಪ್ರತಿನಿಧಿಗಳು, ಅಧಿಕಾರಿಗಳಿಂದ ಬೇಸತ್ತು ಸ್ವಂತ ಹಣದಲ್ಲಿ ರಸ್ತೆ ಅಭಿವೃದ್ಧಿಗೆ ಮುಂದಾದ ರೈತರು


 ವರದಿ-ಶಾರೂಖ್ ಖಾನ್, ಹನೂರು

ಹನೂರು : ರಸ್ತೆ ಅಭಿವೃದ್ಧಿಗೆ ಸ್ಪಂದಿಸದ ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ಬೇಸತ್ತ ರೈತರು ತಮ್ಮ ಲಕ್ಷಾಂತರ ರೂ. ಸ್ವಂತ ಹಣ ಖರ್ಚು ಮಾಡಿ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಜನ ಪ್ರತಿನಿಧಿಗಳ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ. 

ತಾಲೂಕಿನ ಸಮೀಪದ ಕಾಮಗೆರೆ ಗುಂಡಲ್ ಜಲಾಶಯಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಿಂದ ಹಿರತ್ತಪ್ಪ ಜಮೀನಿನಿಂದ ಗುಂಡಲ್ ಡ್ಯಾಂ ಹೆಚ್ಚುವರಿ ನೀರು ಹರಿಯುವ (ವೆಸ್ಟ್‍ವೆರಿ) ಹತ್ತಿರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ತುಂಬಾ ಅಧ್ವಾನವಾಗಿದ್ದು, ಈ ಬಗ್ಗೆ ಹಲವಾರು ಬಾರಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅವರು ರಸ್ತೆ ರಿಪೇರಿಗೆ ಮುಂದಾಗದ ಕಾರಣ ಈ ಭಾಗದ ರೈತರು ತಮ್ಮ ಸ್ವಂತ ಹಣದಿಂದ ರಸ್ತೆ ಅಭಿವೃದ್ಧಿ ಮಾಡಿದ್ದಾರೆ.

ಹಿರತ್ತಪ್ಪ ಜಮೀನಿನಿಂದ ಹಾಗೂ ಕೆಂಚಪ್ಪ ತೋಟದಿಂದ ವೇಸ್ಟ್ ವೆರಿ ಹತ್ತಿರಕ್ಕೆ ಸಂಪರ್ಕ ಕಲ್ಪಿಸುವ ಸುಮಾರು ಎರಡು ಕಿಲೋಮೀಟರ್ ರಸ್ತೆಗೆ ಜೇಡಿ ಮಣ್ಣು ಹಾಕಿ ಗುಂಡಿ ಮುಚ್ಚಿಸಿ ಸಮತಟ್ಟು ಮಾಡಲು ಇದರ ಖರ್ಚಿಗಾಗಿ ಈ ಭಾಗದ ರೈತರು ತಲಾ 2 ರಿಂದ 5 ಸಾವಿರಾರು ರೂ. ನಂತೆ ಲಕ್ಷಾಂತರ ರೂ. ಸಂಗ್ರಹಿಸಿ ರಸ್ತೆ ಅಭಿವೃದ್ಧಿ ಮಾಡಿದ್ದಾರೆ.

ಈ ಭಾಗದಲ್ಲಿ ಹೆಚ್ಚಾಗಿ ನೀರಾವರಿ ಜಮೀನು ಇದ್ದು ಕಬ್ಬಿನ ಬೆಳೆ ಯಥೇಚ್ಛವಾಗಿ ಬೆಳೆಯುತ್ತಾರೆ. ಜೊತೆಗೆ ಭತ್ತ ಜೋಳ ಸೇರಿದಂತೆ ಇನ್ನಿತರ ಬೆಳೆಗಳನ್ನು ಬೆಳೆಯುತ್ತಾರೆ. ಹೆಚ್ಚಾಗಿ ಕಬ್ಬು ಬೆಳೆಯುವುದರಿಂದ ಕಟಾವು ಸಂದರ್ಭದಲ್ಲಿ ಕಬ್ಬಿನ ಲೋಡ್ ಮಾಡಲು ಲಾರಿ ಸಂಚಾರಕ್ಕೆ ತುಂಬಾ ಕಷ್ಟವಾಗಿತ್ತು. ಲೋಡ್ ಮಾಡಿದ ನಂತರ ಹಲವು ಬಾರಿ ಲಾರಿ ಮಗುಚಿ ಬಿದ್ದಿರುವ ಘಟನೆಗಳು ನಡೆದಿದೆ.

ದಿನನಿತ್ಯ ನೂರಾರು ಜನ ರೈತರು ಈ ರಸ್ತೆಯಲ್ಲಿ ತಿರುಗಾಡುತ್ತಿದ್ದು ಮಳೆಗಾಲದಲಂತೂ ರಸ್ತೆ ಅದ್ವಾನದಿಂದ ರೈತರು ಮತ್ತು ಸಾರ್ವಜನಿಕರು ಬಹಳಷ್ಟು ಸಮಸ್ಯೆಗಳನ್ನು ಎದುರಿಸುವಂತಹ ಪರಿಸ್ಥಿತಿಯು ನಿರ್ಮಾಣವಾಗಿರುತ್ತದೆ. ಈ ರಸ್ತೆ ಅಭಿವೃದ್ಧಿಗೆ ಶಾಸಕರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಿಳಿಸಿದರೂ ಕೂಡ ಯಾರು ಸ್ಪಂದಿಸದ ಕಾರಣ ರೈತರು ಸ್ವಯಂ ರಸ್ತೆ ಅಭಿವೃದ್ಧಿಗೆ ಮುಂದಾಗಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು