ವರದಿ-ಮೊಹಮ್ಮದ್ ಶಬ್ಬೀರ್, ಕೆ.ಆರ್.ನಗರ
ಕೆ.ಆರ್.ನಗರ : ಪೋಷಕರು ತಮ್ಮ ಮಕ್ಕಳಿಗೆ ಪಾಠದ ಜತೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಸಲು ಉತ್ತೇಜನ ನೀಡಿದ್ದಲ್ಲಿ ಮಕ್ಕಳ ಸಾಮಾನ್ಯ ಜ್ಞಾನ ಬೆಳೆಯಲು ಸಹಾಯವಾಗುತ್ತದೆ ಎಂದು ತಹಸಿಲ್ಧಾರ್ ಎಸ್.ಸಂತೋಷ್ ಕಿವಿಮಾತು ಹೇಳಿದರು.
ಪಟ್ಟಣದ ಆದರ್ಶ ವಿದ್ಯಾಲಯದಲ್ಲಿ ಶುಕ್ರವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ್ದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನವಿಲ್ಲದ ವಿದ್ಯೆ ಪ್ರಯೋಜನಕ್ಕೆ ಬರುವುದಿಲ್ಲ. ಮಕ್ಕಳು ಕೇವಲ ಉತ್ತಮ ಅಂಕ ಪಡೆದರೇ ಸಾಲದು, ಸಾಮಾನ್ಯ ಜ್ಞಾನದ ಅರಿವು ಇರಬೇಕು. ವಿದ್ಯಾರ್ಥಿಗಳ ಜೀವನದಲ್ಲಿ ಪಠ್ಯ ಒಂದು ಭಾಗವಾದರೇ ಪಠ್ಯೇತರ ಚಟುವಟಿಕೆ ಮತ್ತೊಂದು ಭಾಗವಾಗಿರುತ್ತದೆ. ಮಕ್ಕಳ ಸರ್ವೋತ್ತೋಮುಖ ಬೆಳವಣಿಗೆಗೆ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳು ಮುಖ್ಯ ಎಂದರು.
ಕಾರ್ಯಕ್ರಮ ಕುರಿತು ತಾಪಂ ಇಒ ಹೆಚ್.ಕೆ.ಸತೀಶ್, ಪ್ರೊಬೆಷನರಿ ಉಪ ವಿಭಾಗಾಧಿಕಾರಿ ಜಿ.ಕೆ.ಹರೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಗಾಯತ್ರಿ ಮಾತನಾಡಿದರು.
ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮದಲ್ಲಿ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿ ಭಾರತಾಂಭೆ, ತಿರುಪತಿ ತಿಮ್ಮಪ್ಪ, ಶ್ರೀಕೃಷ್ಣ, ಭದ್ರಕಾಳಿ, ಹನುಮಂತ, ಸರಸ್ವತಿ, ಸಂಗೊಳ್ಳಿರಾಯಣ್ಣ, ಕಿತ್ತೂರು ರಾಣಿ ಚೆನ್ನಮ್ಮ, ಜಲಕನ್ಯೆ, ವೀರಗಾಸೆ ಮುಂತಾದ ವೇಷಗಳನ್ನು ಧರಿಸಿ ರಂಜಿಸಿದರು.
ಕಾರ್ಯಕ್ರಮದಲ್ಲಿ ಟಿಹೆಚ್‌ಒ ಡಾ.ಕೆ.ಆರ್.ಮಹೇಂದ್ರಪ್ಪ, ಆಲ್ಫಾ ಪದವಿ ಪೂರ್ವ ಕಾಲೇಜು ಕಾರ್ಯದರ್ಶಿ ವೈ.ಎಸ್.ಸುಬ್ರಮಣ್ಯ, ಸಾಲಿಗ್ರಾಮ ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಕೆ.ಸತೀಶ್, ಬಿಆರ್‌ಸಿ ವೆಂಕಟೇಶ್, ಸಿಆರ್‌ಪಿ ಈಶ್ವರ್, ಬಿಐಆರ್‌ಟಿ ಶಂಕರೇಗೌಡ, ಆದರ್ಶ ಶಾಲೆ ಮುಖ್ಯ ಶಿಕ್ಷಕಿ ರುಕ್ಮಿಣಿ, ಎಸ್‌ಡಿಎಂಸಿ ಅಧ್ಯಕ್ಷ ಧರ್ಮವೀರ್ ಸೇರಿದಂತೆ ಇನ್ನಿತರರು ಹಾಜರಿದ್ದರು.
0 ಕಾಮೆಂಟ್‌ಗಳು