ಕೆಆರ್ ನಗರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎನ್ನುವುದು ಮೊದಲು ನಿರ್ಧಾರವಾಗಲಿ

ಸಾರಾ ಮಹೇಶ್ ವಿರುದ್ಧ ರವಿಶಂಕರ್ ಗೆಲ್ಲಲು ಸಾಧ್ಯವಿಲ್ಲ : ರುದ್ರೇಶ್

ವರದಿ-ಮೊಹಮ್ಮದ್ ಶಬ್ಬೀರ್, ಕೆ.ಆರ್.ನಗರ

ಕೆ.ಆರ್.ನಗರ : ಕೆ.ಆರ್.ನಗರ ಕ್ಷೇತ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬರುತ್ತದೆ ಎಂಬ ಸುಳ್ಳು ಸುದ್ದಿಯನ್ನು ಹರಡುತ್ತಿರುವ ಡಿ.ರವಿಶಂಕರ್ ರವರೇ ಮುಂದಿನ ಚುನಾವಣೆಗೆ ಯಾರು ಅಭ್ಯರ್ಥಿ ಎನ್ನುವುದನ್ನು ಮೊದಲು ಸ್ಪಷ್ಟಪಡಿಸಿ ಎಂದು ಜೆಡಿಎಸ್ ನಗರ ಪ್ರಧಾನ ಕಾರ್ಯದರ್ಶಿ ರುದ್ರೇಶ್ ಹೇಳಿದರು. 
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ದಿನಗಳ ಹಿಂದೆ ಮುಂದಿನÀ ಚುನಾವಣೆಯಲ್ಲಿ ಕ್ಷೇತ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತಕ್ಕೆ ಬಂದು ಅಧಿಕಾರ ಹಿಡಿಯುತ್ತೇವೆ ಎಂದು ಸಮೀಕ್ಷೆ, ಪೋಲಿಸ್ ವರದಿ ಹೇಳುತ್ತಿದೆ ಎಂಬ ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ನೀವೇ ಹರಡಿಸುತ್ತಿದ್ದೀರಿ. ಯಾವ ಮಾಧ್ಯಮ ಸಮೀಕ್ಷೆ, ಯಾವ ಪೊಲೀಸ್ ಅಧಿಕಾರಿಗಳು ನಿಮಗೆ ತಿಳಿಸಿದ್ದಾರೆ ಮೊದಲು ತಿಳಿಸಿ ಎಂದು ಸವಾಲು ಹಾಕಿದರು.
ಜೆಡಿಎಸ್‌ನಲ್ಲಿ ಸಾ.ರಾ.ಮಹೇಶ್ ನಮ್ಮ ಅಭ್ಯರ್ಥಿ ಮತ್ತು ಹೆಚ್.ಡಿ.ಕುಮಾರಸ್ವಾಮಿ ಯವರೇ ಮುಂದಿನ ಮುಖ್ಯಮಂತ್ರಿ ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಮೊದಲು ಕೆ.ಆರ್.ನಗರ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿ ಯಾರು ಎಂಬುದನ್ನು ತಿಳಿಸಿ. ಮುಖ್ಯಮಂತ್ರಿ ಅಭ್ಯರ್ಥಿ ಬಗ್ಗೆ ನಿಮ್ಮ ಪಕ್ಷದಲ್ಲಿ ಇನ್ನೂ ಗೊಂದಲವಿದೆ. ಗುಂಪುಗಾರಿಕೆಯೂ ನಡೆಯುತ್ತಿದೆ. ಮೊದಲು ನಿಮ್ಮ ಪಕ್ಷದ ಎರಡು ಬಣಗಳನ್ನು ಒಂದು ಮಾಡಿ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವ ಬಗ್ಗೆ ಮಾತನಾಡಿ ಎಂದು ಟಾಂಗ್ ನೀಡಿದರು.
ನಿಮ್ಮ ಒಕ್ಕಲಿಗ ಪ್ರೀತಿ ಇತ್ತೀಚಿನದು. ಹಿಂದೆ ಕಾಂಗ್ರೆಸ್ ಸರ್ಕಾರ ಇದ್ದಾಗ ಟಿಎಪಿಸಿಎಂಎಸ್, ಎಪಿಎಂಸಿ, ಪಿಎಲ್‌ಡಿ ಬ್ಯಾಂಕ್ ಹಾಗೂ ಪುರಸಭೆ ಸೇರಿದಂತೆ ಇನ್ನಿತರ ಸ್ಥಳೀಯ ಸಂಸ್ಥೆಗಳಲ್ಲಿ ನೇಮಕ ಮಾಡುವ ನಾಮ ನಿರ್ದೇಶನ ಸದಸ್ಯರುಗಳ ಸ್ಥಾನವನ್ನು ಮೀಸಲಾತಿಯವರನ್ನು ಬಿಟ್ಟು ಉಳಿದ ಸ್ಥಾನಗಳಿಗೆ ಒಕ್ಕಲಿಗ, ಲಿಂಗಾಯಿತ, ನಾಮಧಾರಿ ಸಮಾಜಗಳ ಒಬ್ಬ ವ್ಯಕ್ತಿಗೆ ಸ್ಥಾನ ಕಲ್ಪಿಸಿದ್ದೀರಾ ಹೇಳಿ? ಎಂದು ಪ್ರಶ್ನಿಸಿದ ಅವರು, ಕುರುಬ ಸಮಾಜದವರು ನಿಮ್ಮಿಂದ ಬೇಸತ್ತು ಈಗ ಜೆಡಿಎಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ಕೆ.ಆರ್.ನಗರದಲ್ಲಿ ಸರ್ವ ಜನಾಂಗವನ್ನೂ ಪ್ರೀತಿಸಿ ಎಲ್ಲರನ್ನೂ ಸಮಾನವಾಗಿ ನೋಡುವ ಸಾ.ರಾ.ಮಹೇಶ್ ವಿರುದ್ಧ ನೀವು ಗೆಲ್ಲಲು ಎಂದಿಗೂ ಸಾಧ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಸುಳ್ಳು ಸುದ್ದಿಗಳನ್ನು ಹರಡಿಸಬೇಡಿ ಎಂದು ಎಚ್ಚರಿಕೆ ನೀಡಿದರು.
ಪುರಸಭಾ ಸದಸ್ಯ ತೋಂಟದಾರ್ಯ, ಜೆಡಿಎಸ್ ಮುಖಂಡರಾದ ಅನಿಲ್‌ಗೌಡ, ಬಂಗಾರಿ ತಮ್ಮೇಗೌಡ, ಮೂಡಲಕೊಪ್ಪಲು ಅಯ್ಯಪ್ಪ, ಅಲೀಂ ಇದ್ದರು.