ವರದಿ : ಟಿ.ಬಿ.ಸಂತೋಷ, ಮದ್ದೂರು
ಮದ್ದೂರು : ತಾಲೋಕಿನ ಕೆ.ಎಂ.ದೊಡ್ಡಿ ಪೊಲೀಸ್ ಠಾಣೆಯಲ್ಲಿ ಇನ್ಸ್‍ಪೆಕ್ಟರ್ ಶಿವಮಲವಯ್ಯ ನೇತೃತ್ವದಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡಗಳ ಕುಂದು ಕೊರತೆ ಸಭೆ ನಡೆಯಿತು.
ದಲಿತ ಮುಖಂಡ ಮಣಿಗೆರೆ ಕಬ್ಬಾಳಯ್ಯ ಮಾತನಾಡಿ, ಗ್ರಾಮ ಪಂಚಾಯಿತಿಗಳಲ್ಲಿ ಎಸ್ಸಿ, ಎಸ್ಟಿ, ಅನುದಾನಗಳನ್ನು ದುರ್ಬಳಕೆ ಮಾಡಿ ಸಮುದಾಯದ ಸವಲತ್ತುಗಳನ್ನು ನೀಡದೆ ವಂಚಿಸಿದ್ದಾರೆ. ಕೊಡಲೇ ಸಂಬಂಧ ಪಟ್ಟ ಅಧಿಕಾರಿಗಳು ವಂಚಕರ ವಿರುದ್ಧ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ದೊಡ್ಡರಸಿನಕೆರೆ ಸಣ್ಣಪ್ಪ ಮಾತನಾಡಿ, ಗ್ರಾಮದಲ್ಲಿ ದಲಿತರಿಗೆ ಮೀಸಲಿಟ್ಟ ಸ್ಮಶಾನವನ್ನು ನೀಡದೆ ಸ್ಥಳೀಯ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿ ದಲಿತ ಸಮುದಾಯದಕ್ಕೆ ಅನ್ಯಾಯವೆಸಗುತ್ತಿದೆ. ಎಂದು ಆರೋಪಿಸಿದರು.
ಜಿಲ್ಲಾ ಸಮತ ಸೈನಿಕ ದಳದ ಜಿಲ್ಲಾಧ್ಯಕ್ಷ ಕರಡಕೆರೆ ಯೋಗೇಶ್ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಬೀಟ್ ಪೊಲೀಸ್‍ರನ್ನು ನೇಮಿಸಿ, ಗ್ರಾಮೀಣ ಪ್ರದೇಶಗಳಲ್ಲಿ ನಡೆಯುತ್ತಿರುವ ಅಪರಾಧಗಳನ್ನು ತಡೆಗಟ್ಟಬೇಕು. ಹಾಗೂ ಮುಂದಿನ ಸಭೆಗೆ ಕಂದಾಯ ಅಧಿಕಾರಿಗಳನ್ನ ಆಹ್ವಾನಿಸಬೇಕು ಎಂದು ಮನವಿ ಮಾಡಿದರು
ಕೆಪಿಸಿಸಿ ಸದಸ್ಯ ಚಿದಂಬರ ಮೂರ್ತಿ ಮಾತನಾಡಿ, ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದು, ಕೂಡಲೇ ಅಂತಹವರ ವಿರುದ್ಧ ಕ್ರಮ ಜರುಗಿಸಿ ಸ್ಥಳೀಯ ಮಟ್ಟದಲ್ಲಿ ಅಧಿಕಾರಿಗಳ ಸಭೆ ನಡೆಸಿ ಕಾನೂನು ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.
ನಂತರ ಇನ್ಸ್‍ಪೆಕ್ಟರ್ ಶಿವಮಲವಯ್ಯನವರು ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿ, ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗೆ ಕಳುಹಿಸಿ ಅಧಿಕಾರಿಗಳ ಗಮನಕ್ಕೆ ತಂದು ಸಮಸ್ಯೆಗಳನ್ನು ಬಗೆ ಹರಿಸಲಾಗುವುದು. ಜತೆಗೆ ಕೆ.ಎಂ.ದೊಡ್ಡಿ ವ್ಯಾಪ್ತಿಯ ಗ್ರಾಮಗಳಿಗೆ ಬೀಟ್ ಪೊಲೀಸ್ ನೇಮಕ ಮಾಡಿ ಗ್ರಾಮಗಳಲ್ಲಿ ಅಪರಾಧ ಚಟುವಟಿಕೆ ಸಂಭವಿಸದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯಿಂದ ಸ್ಮಾರ್ಟ್ ಈ ಬಿಟ್ ಎಂಬ ಅಪ್ ಮೂಲಕ ಸಾರ್ವಜನಿಕರ ಸಮಸ್ಯೆಗಳಿಗೆ ಶೀಘ್ರವಾಗಿ ಪರಿಹಾರ ಒದಗಿಸಲಾಗುವುದು. ಗ್ರಾಮಗಳಲ್ಲಿ ಯಾವುದೇ ಅಪರಾಧ ಚಟುವಟಿಕೆ ಸಂಭವಿಸಿದರೆ 112ಗೆ ಕರೆ ಮಾಡಿ ದೂರು ನೀಡಿದರೆ ತಕ್ಷಣ ಕ್ರಮ ವಹಿಸಲಾಗುತ್ತದೆ ಎಂದು ಸಲಹೆ ನೀಡಿದರು.
0 ಕಾಮೆಂಟ್‌ಗಳು