ಅಶೋಕಾಪುರಂ ಅಂಬೇಡ್ಕರ್ ಉದ್ಯಾನವನದಲ್ಲಿ ಮಹಿಷಾ ದಸರಾ ಆಚರಣೆ
ಮೈಸೂರು : ಮಹಿಷ ಈ ನೆಲದ ಒಡೆಯನಾಗಿದ್ದು, ಆತನಿಗೆ ಗೌರವ ಕೊಡದ ಮೈಸೂರು ದಸರಾ ಅಪೂರ್ಣ ಎಂದು ಶ್ರೀ ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು.
ನಗರದ ಅಶೋಕಪುರಂ ಅಂಬೇಡ್ಕರ್ ಉದ್ಯಾನವನದ ಅಂಬೇಡ್ಕರ್ ಪುತ್ಥಳಿ ಮುಂಭಾಗ ಭಾನುವಾರ ಮಹಿಷ ದಸರಾ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ಮಹಿಷ ದಸರಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಸರ್ಕಾರ ಮಹಿಷ ದಸರಾ ಆಚರಣೆಗೆ ಅವಕಾಶ ನೀಡದೆ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚಿದ್ದಾರೆ. ಮುಖ್ಯಮಂತ್ರಿಗಳು, ರಾಷ್ಟ್ರಪತಿಗಳು ಚಾಮುಂಡೇಶ್ವರಿ ದರ್ಶನಕ್ಕೆ ಹೋಗುವಾಗ ಮಹಿಷನನ್ನು ದಾಟಿಕೊಂಡೇ ಹೋಗಬೇಕು ಎನ್ನುವುದು ನೆನಪಿರಲಿ ಎಂದರು.
ಈ ಹಿಂದೆ ಆಡಳಿತ ನಡೆಸಿದ್ದ ಕಾಂಗ್ರೆಸ್ ಸರ್ಕಾರ ಮಹಿಷ ದಸರಾ ಆಚರಣೆಗೆ ಅವಕಾಶ ನೀಡಿತ್ತು. ಬಿಜೆಪಿ ಸರ್ಕಾರ ಪೊಲೀಸರನ್ನು ಮುಂದಿಟ್ಟು ಮಹಿಷ ದಸರಾ ಆಚರಣೆಗೆ ಅವಕಾಶ ನೀಡಿಲ್ಲ. ಎಷ್ಟು ದಿನಾಂತ ಪ್ರತಿಮೆಯನ್ನು ಬಟ್ಟೆಯಿಂದ ಮುಚ್ಚುತ್ತೀರಿ. ನಾಳೆಯೂ ಮುಚ್ಚುವಿರಾ? ಮುಂದೆ ಎಷ್ಟು ದಿನ ಮುಚ್ಚಿಸುತ್ತೀರಿ? ಎಂದು ಪ್ರಶ್ನಿಸಿದ ಅವರು, ಮೈಸೂರು ರಾಜರನ್ನು ಮಹಿಷ ಮಂಡಳಾಧೀಶ್ವರ ಬಹುಪರಾಕ್ ಎಂದು ಹೊಗಳಲಾಗುತ್ತಿತ್ತು. ಏಕೆ ಎನ್ನುವುದು ಗೊತ್ತಿಲ್ಲವೇ? ಎಂದರು. ನಾವು ಚಾಮುಂಡಿಬೆಟ್ಟಕ್ಕೆ ಬಂದರೆ ತಡೆಯುತ್ತೀರಿ ಏಕೆ? ನೀವು ಅಸ್ಪೃಶ್ಯರು ಬೆಟ್ಟಕ್ಕೆ ಬರಬೇಡಿ ಎಂದು ನೇರವಾಗಿ ಹೇಳಿಬಿಡಿ ನೋಡೋಣ.
ಇಂದು ಮತ್ತು ನಾಳೆಯೂ ನಾವು ಚಾಮುಂಡಿಬೆಟ್ಟಕ್ಕೆ ಬರುತ್ತೇವೆ. ನಮ್ಮನ್ನು ತಡೆದರೆ ಪೊಲೀಸ್ ಆಯುಕ್ತರ ವಿರುದ್ಧ ಅಟ್ರಾಸಿಟಿ ಕೇಸ್ ದಾಖಲಿಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಎಲ್ಲಾ ದೇವರು ಒಳ್ಳೆಯವರಲ್ಲ, ಎಲ್ಲ ರಾಕ್ಷಸರೂ ಕೆಟ್ಟವರಲ್ಲ ಎಂದು ಹೈಕೋರ್ಟ್ ನ್ಯಾಯಮೂರ್ತಿ ಕೃಷ್ಣಯ್ಯ ದೀಕ್ಷಿತ್ ಹೇಳಿದ್ದನ್ನು ನೆನಪಿಸಿದ ಜ್ಞಾನಪ್ರಕಾಶ ಸ್ವಾಮೀಜಿ, ಈ ನೆಲದ ಧರ್ಮವನ್ನು ಕಾಪಾಡುವುದು ನಮ್ಮ ಕರ್ತವ್ಯ. ಬಿಜೆಪಿ ಸರ್ಕಾರ ಬಹುತ್ವ, ಸಂವಿಧಾನ ಮತ್ತು ಪ್ರಜಾಭುತ್ವದ ಕಗ್ಗೊಲೆ ನಡೆಸುತ್ತಿದೆ ಎಂದರು.
ಖ್ಯಾತ ಸಾಹಿತಿ ಪ್ರೊ.ಕೆ.ಎಸ್.ಭಗವಾನ್ ಮಾತನಾಡಿ, ಮಹಿಷ ರಾಕ್ಷಸನೇ ಆಗಿದ್ದರೆ, ದುಷ್ಟವ್ಯಕ್ತಿಯೇ ಆಗಿದ್ದಿದ್ದರೆ ಮಹಿಷ ಮಂಡಲ ಎಂಬ ಹೆಸರನ್ನು ಏಕೆ ಇಡುತ್ತಿದ್ದರು? ಎಂದು ಪ್ರಶ್ನಿಸಿದರು.
ಮಹಿಷ ದಸರಾ ಸಹಿಸದ ಪ್ರತಿಗಾಮಿಗಳು ನಮಗೆ ಕಳೆದ ಮೂರು ವರ್ಷಗಳಿಂದಲು ತೊಂದರೆಯನ್ನೇ ನೀಡುತ್ತಾ ಬರುತ್ತಿದ್ದಾರೆ. ಆದರೂ ಇದಕ್ಕೆಲ್ಲಾ ಅಂಜದೆ ಮಹಿಷ ದಸರಾ ಆಚರಣೆ ಮಾಡುತ್ತಿದ್ದೇವೆ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದರು.
ಮಹಿಷ ಈ ಭೂಮಿಯ ಒಡೆಯ ಅವನು ಕ್ರಿ.ಪೂ ೩ನೇ ಶತಮಾನದಲ್ಲಿ ಮೈಸೂರನ್ನು ಆಳುತಿದ್ದ ಇದಕ್ಕೆ ನಮ್ಮಲ್ಲಿ ಸಾಕಷ್ಟು ದಾಖಲೆಗಳಿವೆ. ಇದಕ್ಕಾಗಿ ಇಲ್ಲಿಗೆ ಮಹಿಷ ಮಂಡಲ ಎಂಬ ಹೆಸರು ಬಂತು.
ನಾಲ್ಕು ಶತಮಾನಗಳ ಹಿಂದೆ ಹೊರ ದೇಶದಿಂದ ಬಂದವರು ಇಲ್ಲಿನ ಮೂಲನಿವಾಸಿಗಳನ್ನು ವಶಕ್ಕೆ ಪಡೆದು ಮೂಲ ಧರ್ಮವನ್ನು ಕೊಂದು ವೈದಿಕ ಧರ್ಮವನ್ನು ಮುನ್ನಲೆಗೆ ತಂದರು.
-ಪ್ರೊ.ಕೆ.ಎಸ್.ಭಗವಾನ್, ಸಾಹಿತಿ
ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡಿ ಅವಮಾನ ಮಾಡಲಾಗಿತ್ತು. ಆದರೆ, ಅಂಬೇಡ್ಕರ್ ಸಂವಿಧಾನ ಹೊಂದಿರುವ ಭಾರತದಲ್ಲಿ ದ್ರೌಪದಿ ಮುರ್ಮು ರಾಷ್ಟ್ರಪತಿಯಾಗಿ ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿಗೆ ಆಗಮಿಸುತ್ತಿರುವುದು ಸಂತೋಷದ ವಿಷಯ. ಇದು ನಮ್ಮ ಸಂವಿಧಾನದ ಶಕ್ತಿ. ದ್ರೌಪದಿ ಮುರ್ಮು ಕೂಡ ಬುಡಕಟ್ಟು ಜನಾಂಗದ ಮಹಿಳೆ ಅಂದರೆ, ನಮ್ಮ ಮಹಿಷಾಸುರನ ವಂಶಸ್ಥರು ಎನ್ನುವುದೂ ಕೂಡ ಹೆಮ್ಮೆಯ ವಿಷಯ.
-ಜ್ಞಾನ ಪ್ರಕಾಶ ಸ್ವಾಮೀಜಿ,
ಪೀಠಾಧಿಪತಿ, ಶ್ರೀ ಉರಿಲಿಂಗಿ ಪೆದ್ದಿಮಠ
0 ಕಾಮೆಂಟ್‌ಗಳು