ಮೈಸೂರು : ಪತ್ರಿಕಾಗೋಷ್ಠಿ ನಡೆಯುತ್ತಿದ್ದ ವೇಳೆ ಪತ್ರಕರ್ತರ ಭವನಕ್ಕೆ ಅನುಮತಿ ಇಲ್ಲದೆ ನುಗ್ಗಿ ದಾಂಧಲೆ ಎಬ್ಬಿಸಿದ ಕರಾಮುವಿವಿ ಮಂಡ್ಯ ಪ್ರಾದೇಶಿಕ ವಿಭಾಗದ ನಿರ್ದೇಶಕ ಸುಧಾಕರ ಹೊಸಳ್ಳಿ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಸೆ.೨೮ ರಂದು ಮೈಸೂರು ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಡಾ.ಕೆ.ಮಹದೇವ್ ಮತ್ತು ವಿಶ್ರಾಂತ ಕುಲಪತಿ ಎಂ.ಎಸ್.ರಾಮೇಗೌಡ ಎಂಬವರು ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಕರಾಮುವಿವಿ ಕುಲಪತಿ ಡಾ.ವಿದ್ಯಾಶಂಕರ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಕುರಿತು ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ಪತ್ರಿಕಾ ಭವನಕ್ಕೆ ನುಗ್ಗಿದ ಸುಧಾಕರ ಹೊಸಳ್ಳಿ ಮತ್ತಿತರರು, ಡಾ.ಕೆ.ಮಹಾದೇವ್ ಅವರ ಪತ್ರಿಕಾಗೋಷ್ಠಿಗೆ ಅಡ್ಡಿಪಡಿಸಿ ಕೂಗಾಟ ನಡೆಸಿದ್ದರು. ಈ ವೇಳೆ ಪತ್ರಕರ್ತರು ಸುಧಾಕರ ಹೊಸಳ್ಳಿ ಅವರನ್ನು ಹೊರಕ್ಕೆ ಕಳಿಸಿದರಾದರೂ ಸುಧಾಕರ ಅವರು ಪತ್ರಿಕಾ ಭವನದ ಆವರಣದಲ್ಲಿ ಏರು ದನಿಯಲ್ಲಿ ಕೂಗಾಟ ನಡೆಸಿ ಅವಾಚ್ಯ ಶಬ್ದಗಳಿಂದ ಡಾ.ಕೆ.ಮಹಾದೇವ್ ಅವರನ್ನು ನಿಂದಿಸಿ ಪತ್ರಿಕಾ ಭವನದ ಘನತೆಗೆ ಧಕ್ಕೆ ತಂದಿದ್ದಾರೆಂದು ಸಂಘದ ಕಾರ್ಯದರ್ಶಿ ಸುಬ್ರಹ್ಮಣ್ಯ ಸುಧಾಕರ ಹೊಸಳ್ಳಿ ವಿರುದ್ಧ ಕೆ.ಆರ್.ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರು ಪರಿಶೀಲಸಿದ ಪೊಲೀಸರು ಸುಧಾಕರ ಹೊಸಳ್ಳಿ ವಿರುದ್ಧ ಐಪಿಸಿ ಕಲಂ ೧೮೬೦(೩೪೧,೫೦೪,೩೪) ರೀತ್ಯಾ ಎಫ್‌ಐಆರ್ ದಾಖಲಿಸಿದ್ದಾರೆ.
0 ಕಾಮೆಂಟ್‌ಗಳು